
ಬೆಂಗಳೂರು: ದೇಶದಲ್ಲಿ ಮಾತ್ರವಲ್ಲ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್) ಬೆಳವಣಿಗೆಯಲ್ಲಿ ಕೂಡ ದಾಖಲೆ ಬರೆದಿದೆ. 2016ನೇ ಸಾಲಿನ ವಿಮಾನ ಹಾರಾಟ, ಪ್ರಯಾಣಿಕರು ಹಾಗೂ ಸರಕು ಸಾಗಣೆ ವರದಿ ಬುಧವಾರ ಬಿಡುಗಡೆಗೊಂಡಿದ್ದು ಕೆಐಎಎಲ್ ಈ ಸಾಲಿನಲ್ಲಿ ಪ್ರಯಾಣಿಕರ ನಿರ್ವಹಣೆಯಲ್ಲಿ ಶೇ.22.8ರಷ್ಟುಬೆಳವಣಿಗೆ ದಾಖಲಿಸಿದೆ. ದಿನವೊಂದಕ್ಕೆ ಸರಾಸರಿ 60 ಸಾವಿರದಂತೆ ದಾಖಲೆ 2.2 ಕೋಟಿ ಪ್ರಯಾಣಿಕರು ಇಲ್ಲಿಂದ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ.
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಪ್ರಯಾಣಿಕರನ್ನು ಜತೆಗೆ ಸರಕು ಸಾಗಣೆ ನಿರ್ವಹಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕೆ.ಐ.ಎ.ಎಲ್ ಆರಂಭಗೊಂಡು 8 ವರ್ಷಗಳಲ್ಲಿ(ಮೇ2008) ದೇಶದ ಅತಿ ವೇಗದಲ್ಲಿ ಬೆಳೆಯುತ್ತಿರುವ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಭಾರತದ ನಂ.1, ದೇಶದಲ್ಲೇ ನಂ.3 ಏರ್‌ಪೋರ್ಟ್ ಎಂಬ ಮೇರು ಸಾಧನೆ ಮೆರೆದಿದೆ.
ದಕ್ಷಿಣ ಭಾರತದಿಂದ ದೇಶಿ ಮತ್ತು ಅಂತಾರಾಷ್ಟ್ರೀಯ ನಗರಗಳಿಗೆ ಪ್ರಯಾಣಿಸಲು ಕೆಐಎಎಲ್ ಸೂಕ್ತವಾದ ಏರ್‌ಪೋರ್ಟ್ ಎಂಬ ಆಯ್ಕೆಯನ್ನು ವಿಮಾನ ಯಾನಿಗಳು ಮಾಡುತ್ತಿದ್ದು ಪ್ರಯಾಣಿಕರ ಮತ್ತು ವಿಮಾನಗಳ ಸಂಖ್ಯೆ ಪ್ರತಿ ವರ್ಷ ಗಣನೀಯ ಪ್ರಮಾಣದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೆಐಎಎಲ್ ಹೇಳಿದೆ. 2016ರಲ್ಲಿ 18.62 ದಶಲಕ್ಷದಷ್ಟಿದ್ದ (1.862 ಕೋಟಿ)ಪ್ರಯಾಣಿಕರ ಸಂಖ್ಯೆ ಈ ವರ್ಷ 2.208 ಕೋಟಿಗಳಿಗೇರಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇವರಲ್ಲಿ 3.56 ದಶಲಕ್ಷ(35ಲಕ್ಷ) ಪ್ರಯಾಣಿಕರು ಅಂತಾರಾಷ್ಟ್ರೀಯ ನಗರಗಳಿಗೆ ಪ್ರಯಾಣ ಮಾಡಿದ್ದಾರೆ.
ಕೇವಲ ಪ್ರಯಾಣಿಕರು ಮಾತ್ರವಲ್ಲ ಸರಕು ಸಾಗಣೆಯಲ್ಲೂ ದಾಖಲೆ ಬರೆದಿದ್ದು ಈ ಸಾಲಿನಲ್ಲಿ 3,14,060 ಮೆಟ್ರಿಕ್ ಟನ್ ಸರಕು ನಿರ್ವಹಣೆ ಮಾಡಿದೆ. 2008ರಿಂದ ಈ ವರೆಗೆ ಒಟ್ಟು 20 ಲಕ್ಷ ಮೆಟ್ರಿಕ್ ಟನ್ ಸರಕು ಕೆಐಎಎಲ್‌ನಿಂದ ನಿರ್ವಹಣೆಯಾಗಿದೆ.
ವರ್ಷದಿಂದ ವರ್ಷಕ್ಕೆ ಕೆಐಎಎಲ್ ದಾಖಲೆ ಬರೆಯುತ್ತಲೇ ಸಾಗುತ್ತಿರುವುದು ಹೆಮ್ಮೆ ಎನಿಸಿದೆ. ನಮ್ಮ ಪ್ರಯಾಣಿಕರಿಗೆ ಇನ್ನಷ್ಟುಉತ್ತಮ ಸೇವೆ ನೀಡುವುದೇ ನಮ್ಮ ಗುರಿಯಾಗಿದೆ. 2017ರಲ್ಲಿ ಇನ್ನಷ್ಟುನಾವೀನ್ಯವಾದ ಮತ್ತು ಸಂವಹನದ ಡಿಜಿಟಲ್ ಸೌಕರ್ಯಗಳನ್ನು ನಮ್ಮ ಗ್ರಾಹಕರಿಗೆ ನೀಡಲು ಉದ್ದೇಶಿಸಲಾಗಿದೆ.
- ಜಿ.ವಿ.ಸಂಜಯ ರೆಡ್ಡಿ, ಕೆಐಎಎಲ್ ಆಡಳಿತ ನಿರ್ದೇಶಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.