‘ಜೈ ಶ್ರೀರಾಮ್’ ಹೇಳದ್ದಕ್ಕೆ ಮದ್ರಸಾ ಶಿಕ್ಷಕನನ್ನು ರೈಲಿನಿಂದ ತಳ್ಳಿದ್ರು!

By Web DeskFirst Published Jun 26, 2019, 9:39 PM IST
Highlights

 ಜೈ ಶ್ರೀರಾಮ್‌ ಎಂದು ಹೇಳದ್ದಕ್ಕೆ ಮದರಸಾ ಶಿಕ್ಷಕನನ್ನು ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿರುವ ಘಟನೆ ನಡೆದಿದೆ.

ಕೋಲ್ಕತ್ತಾ, [ಜೂ.26]: ಜೈ ಶ್ರೀರಾಮ್‌ ಎಂದು ಹೇಳದ್ದಕ್ಕೆ ಗುಂಪೊಂದು ಮದರಸಾ ಶಿಕ್ಷಕನನ್ನು ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಹೊರದಬ್ಬಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಮದರಸಾ ಶಿಕ್ಷಕನಾಗಿದ್ದ ಹಫೀಜ್‌ ಮೊಹಮ್ಮದ್‌ ಶಾರುಕ್‌ ಹಲ್ದಾರ್‌ ಎಂಬ 26 ವರ್ಷದ ಮುಸ್ಲಿಂ ವ್ಯಕ್ತಿ ಕನ್ನಿಂಗ್‌ನಿಂದ ಹೂಗ್ಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ನಾಲ್ಕೈದು ಜನರ ಗುಂಪು ಶಿಕ್ಷಕನಿಗೆ ಜೈ ಶ್ರೀರಾಮ್‌ ಎಂದು ಹೇಳುವಂತೆ ಒತ್ತಾಯಿಸಿ ಅವರನ್ನು ಥಳಿಸಿ ರೈಲಿನಿಂದ ಹೊರದಬ್ಬಿದ್ದಾರೆ.

ಗುಂಪೊಂದು ವ್ಯಕ್ತಿಯನ್ನು ಜೈ ಶ್ರೀರಾಮ್‌ ಎಂದು ಹೇಳುವಂತೆ ಒತ್ತಾಯಿಸಿದೆ. ಇದನ್ನು ನಿರಾಕರಿಸಿದ್ದಕ್ಕೆ ಆತನಿಗೆ ಚೆನ್ನಾಗಿ ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಪಾರ್ಕ್‌ ಸರ್ಕಸ್‌ ಸ್ಟೇಷನ್‌ ಸಮೀಪ ಹೊರದಬ್ಬಿದೆ ಎಂದು ಸಂತ್ರಸ್ತ ದೂರಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ತನಿಗೆ ಮುಖ ಮತ್ತು ಕೈಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಕುರಿತಂತೆ ಬಲ್ಲಿಗುಂಜ್‌ ಸರ್ಕಾರಿ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಲಾಗಿದೆ. 

ಇತ್ತೀಗಷ್ಟೇ ಜಾರ್ಖಂಡ್ ನಲ್ಲಿ 22 ವರ್ಷದ ಯುವಕ ತಬ್ರೆಜ್‌ ಅನ್ಸಾರಿಯನ್ನು ಯುವಕರ ಗುಂಪು ಒತ್ತಾಯಪೂರ್ವಕವಾಗಿ ಜೈ ಶ್ರೀರಾಮ್ ಮತ್ತು ಜೈ ಹನುಮಾನ್ ಎಂದು ಹೇಳುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರಾಕರಿಸಿದ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಆತ ಮೃತಪಟ್ಟ ನಂತರ ಪಶ್ಚಿಮ ಬಂಗಾಳದ ಈ ಪ್ರಕರಣ ಬೆಳಕಿಗೆ ಬಂದಿದೆ.

click me!