
ಬೆಂಗಳೂರು (ನ.18): ಆಡಂಬರ ಮೆರೆದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರಿ ವಿವಾಹದ ಬಳಿಕ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ತ್ಯಾಜ್ಯವನ್ನು ತೆರವುಗೊಳಿಸಲು ಬಿಬಿಎಂಪಿಯ ತ್ಯಾಜ್ಯ ಸಾಗಣೆ ವಾಹನಗಳು ಬಳಕೆಯಾಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಅರಮನೆ ಮೈದಾನದಲ್ಲಿ ನಡೆಯುವ ಸಭೆ, ಸಮಾರಂಭಗಳಲ್ಲಿ ಸೃಷ್ಟಿಯಾಗುವ ಕಸ ವಿಲೇವಾರಿಗೆ ಬಿಬಿಎಂಪಿಯ ವಾಹನಗಳ ಬಳಕೆಗೆ ಅವಕಾಶವಿಲ್ಲದಿದ್ದರೂ ರೆಡ್ಡಿ ಪುತ್ರಿ ವಿವಾಹದಿಂದ ಉಂಟಾಗಿದ್ದ ತ್ಯಾಜ್ಯಕ್ಕೆ ಮಾತ್ರ ಇದು ಅನ್ವಯವಾಗಲಿಲ್ಲ. ಈ ಕುರಿತು ‘ಕನ್ನಡಪ್ರಭ' ಪ್ರಶ್ನಿಸಿದಾಗ, ‘‘ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು,'' ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಅರಮನೆ ಮೈದಾನ, ಕಲ್ಯಾಣ ಮಂಟಪ ಸೇರಿದಂತೆ ಭಾರಿ ಕಸ ಉತ್ಪಾದಕ ಘಟಕಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಬಂಧಪಟ್ಟವರೇ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಈ ಘಟಕಗಳ ತ್ಯಾಜ್ಯ ಸಾಗಣೆಗೆ ಬಿಬಿಎಂಪಿ ವಾಹನಗಳನ್ನು ಬಳಸುವಂತಿಲ್ಲ. ಆದರೆ ಈ ನಿಯಮ ಗಾಳಿಗೆ ತೂರಿ ಬಿಬಿಎಂಪಿ ವಾಹನಗಳು ಅರಮನೆ ಮೈದಾನದಲ್ಲಿ ರೆಡ್ಡಿ ಪುತ್ರಿ ವಿವಾಹದ ಕಸ, ತ್ಯಾಜ್ಯ ತುಂಬಿಸಿದವು. ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥಪ್ರಸಾದ್ ಖಾಸಗಿ ಏಜೆನ್ಸಿಗಳು ಹಣ ಮಾಡುವ ಸಲುವಾಗಿ ನಿಯಮಬಹಿರವಾಗಿ ಮದುವೆ ಕಸ ಸಂಗ್ರಹಿಸಿರಬಹುದು ಎಂದರು.
ನಿಧಾನವಾಗಿ ತೆರವು: ಜನಾರ್ದನ ರೆಡ್ಡಿ ಪುತ್ರಿಯ ಮದುವೆ ಸಮಾರಂಭ ಮುಗಿದ ಬೆನ್ನಲ್ಲೇ ಅರಮನೆ ಮೈದಾನದಲ್ಲಿ ನಿರ್ಮಾಣಗೊಂಡ ಸೆಟ್‌ಗಳ ತೆರವುಗೊಳಿಸುವ ಕಾರ್ಯ ಶುರುವಾಗಿದ್ದು, ಸಂಪೂರ್ಣವಾಗಿ ತೆರವುಗೊಳಿಸಲು ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಮೇಲ್ವಿಚಾರಕರು ಹೇಳಿದ್ದಾರೆ.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ (ಪಿಒಪಿ) ನಿರ್ಮಾಣ ವಾಗಿದ್ದ ಪ್ರತಿಕೃತಿಗಳನ್ನು ಸಾಮಾನ್ಯ ವೇದಿಕೆಗಳಂತೆ ತೆರವುಗೊಳಿಸಲು ಸಾಧ್ಯವಿಲ್ಲ. ಎಲ್ಲವನ್ನು ಕತ್ತರಿಸಿಯೇ ಸ್ವಚ್ಛ ಮಾಡಬೇಕು. ಹಾಗಾಗಿ ಹೆಚ್ಚು ಸಮಯ ಹಿಡಿಯುತ್ತದೆ. ಇಲ್ಲಿನ ನೂರಾರು ಸಿಬ್ಬಂದಿ ಹಗಲಿರುಳು ಕೆಲಸ ಮಾಡಿದರು ಎಲ್ಲ ಅಲಂಕಾರಿಕ ಸೆಟ್‌ಗಳ ತೆರವಿಗೆ ಕನಿಷ್ಠ 5 ದಿನ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಅರಮನೆಯ ಪ್ರವೇಶದ ದ್ವಾರದಲ್ಲಿ ಗಣ್ಯರನ್ನು ಆಹ್ವಾನಿಸಲು ಸಿದ್ಧಪಡಿಸಲಾಗಿದ್ದ ಸ್ವಾಗತ ಮಂಟಪ, ಕಮಾನುಗಳು, ಪ್ರವೇಶ ದ್ವಾರದ ಎಡ ಭಾಗದಲ್ಲಿ ನಿರ್ಮಿಸಿರುವ ಸಣ್ಣ-ಸಣ್ಣ ಶೆಡ್‌ಗಳೂ ತೆರವಾಗಿಲ್ಲ. ಈ ಬಗ್ಗೆ ಸಂಪರ್ಕಿಸಿದಾಗ ಅರಮನೆ ಉಸ್ತುವಾರಿ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದರು.
ಹಸಿ-ಒಣ ಕಸ ಒಂದೆ!: ಬಿಎಂಎಂಪಿ ಆದೇಶದ ಪ್ರಕಾರ ಹಸಿ-ಒಣ ಕಸವನ್ನು ಪ್ರತ್ಯೇಕವಾಗಿ ಸಾಗಿಸಿ ಸಂಸ್ಕರಿಸಬೇಕು. ಆದರೆ, ಇಲ್ಲಿ ಎಲ್ಲವನ್ನು ಒಟ್ಟಿಗೆ ಹಾಕಲಾಗಿದೆ. ಹಾಗಾಗಿ ಕಸ ವಿಂಗಡಣೆ ಹಾಗೂ ಪ್ರತ್ಯೇಕ ಸಾಗಣೆ ನಿಯಮ ಕೂಡ ಪಾಲನೆಯಾಗದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.