
ಬೆಂಗಳೂರು (ಅ. 25): ಬಿಬಿಎಂಪಿ ಪೌರಕಾರ್ಮಿಕರಲ್ಲೂ #ಮೀಟೂ ಅಭಿಯಾನ ಆರಂಭವಾಗಿದೆ.
ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಕೆಲಸದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಬಯಲಿಗೆಳೆಯುತ್ತಿರುವ ಮೀಟೂ ಅಭಿಯಾನ ಕೇವಲ ಶ್ರೀಮಂತರಿಗೆ, ಸ್ಯಾಂಡಲ್ ವುಡ್ ಸ್ಟಾರ್ ಗಳಿಗೇ ಅಲ್ಲ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪೌರಕಾರ್ಮಿಕೆಯರಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಈಗ ಇಡೀ ಬಿಬಿಎಂಪಿಯನ್ನೇ ಗಡಗಡ ನಡುಗಿಸಿದೆ.
ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು, ಪೌರಕಾರ್ಮಿಕೆಯಾಗಿ ಕೆಲಸ ಮಾಡುವ ತನ್ನ ಅತ್ತೆಗೆ, ಪಾಲಿಕೆ ಅಧಿಕಾರಿಗಳಿಂದ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಬಡವರು ಪೌರಕಾರ್ಮಿಕ ಕೆಲಸಕ್ಕಾಗಿ ಬರುತ್ತಾರೆ. ಆದರೆ ನೀಚ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಾರೆ. ನನ್ನ ಅತ್ತೆಯನ್ನು ಕೂಡಾ ನೀಚ ಅಧಿಕಾರಿಗಳು ಕಾಮಾಲೆ ಕಣ್ಣಿಂದ ನೋಡುತ್ತಾರೆ. ಈ ಬಗ್ಗೆ ಒಂದು ಗಂಟೆಗಳ ಕಾಲ ನಮ್ಮತ್ತೆ ಕಣ್ಣೀರು ಹಾಕಿದ್ದಾರೆ. ಇವರ ಕಾಮಚೇಷ್ಟೆಗೆ ಬಿಬಿಎಂಪಿ ಯಾವಾಗ ಬ್ರೇಕ್ ಹಾಕುತ್ತೆ ಎಂದು ನೋವುತೋಡಿಕೊಂಡು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.
ಇನ್ನೊಂದು ಪೋಸ್ಟ್ ಅಪ್ ಲೋಡ್ ಆಗಿದ್ದು, ಬೆಂಗಳೂರಿನ ಪೌರಕಾರ್ಮಿಕರ ಮೇಲೆ ನಿತ್ಯ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಹೇಳಿದ ಹಾಗೆ ಕೇಳದಿದ್ದರೆ ಹಾಜರಾತಿ ಕಟ್ ಮಾಡುತ್ತಾರೆ. ಪೌರಕಾರ್ಮಿಕರ ಬಳಿ ಸ್ಮಾರ್ಟ್ ಫೋನ್ ಇಲ್ಲ, ಇಲ್ಲದಿದ್ರೆ ಎಲ್ಲರ ಮುಖವಾಡ ಬಯಲಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಮೀಟೂ ಅಭಿಯಾನದಿಂದ ಪ್ರತಿಯೊಬ್ಬರ ನೀಚ ಬುದ್ದಿಗಳು, ಕಪಟ ಮುಖಗಳು ಹೊರಬರತೊಡಗಿದ್ದು, ಇದೀಗ ಪೌರಕಾರ್ಮಿಕರೂ ಕಿರುಕುಳ ನೀಡುವ ಅಧಿಕಾರಿಗಳ ವಿರುದ್ಧ ಮಾತನಾಡಲು ಮುಂದಾಗಿದ್ದಾರೆ. ಈ ಬಗ್ಗೆ ಬಿಬಿಎಂಪಿ ಆಡಳಿತ ಯಾವ ರೀತಿ ಕ್ರಮಕೈಗೊಳ್ಳತ್ತೆ ಎಂದು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.