ಬಿಬಿಎಂಪಿ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ತೆರಳಲು ಸಿಎಂ ಬೀಳ್ಕೊಡುಗೆ

Published : Oct 11, 2017, 11:46 PM ISTUpdated : Apr 11, 2018, 12:50 PM IST
ಬಿಬಿಎಂಪಿ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ತೆರಳಲು ಸಿಎಂ ಬೀಳ್ಕೊಡುಗೆ

ಸಾರಾಂಶ

ಸಂಸತ್‌ನಲ್ಲೇ ಸ್ವಚ್ಛತೆ ಕಾಪಾಡುವುದಿಲ್ಲ ನಮ್ಮ ಸಾರ್ವಜನಿಕರಿಗೆ ಶಿಸ್ತು ಇಲ್ಲ. ದೆಹಲಿಯಲ್ಲಿ ಕೇಂದ್ರ ಸಚಿವರ ಕಾರ್ಯಾಲಯದಲ್ಲೂ ಎಲ್ಲೆಂದರಲ್ಲಿ ಎಲೆ-ಅಡಿಕೆ ಉಗಿದು ಗಲೀಜು ಮಾಡಿರುತ್ತಾರೆ. ಹಿಂದೆ ಲಾಲೂಪ್ರಸಾದ್ ಯಾದವ್ ಕೇಂದ್ರ ಸಚಿವರಾಗಿದ್ದಾಗ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಸಚಿವರ ಕೊಠಡಿಯ ಗೋಡೆಗಳ ಮೇಲೆಯೇ ಎಲೆ-ಅಡಿಕೆ ಗಲೀಜು ಉಗಿಯಲಾಗಿತ್ತು. ಇದೇನಪ್ಪಾ ಇದು ಎಂದುಕೊಂಡು ಬಂದೆ. ವಿದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡಿದರೆ ದಂಡ ವಿಧಿಸುತ್ತಾರೆ. ಅದು ನಮ್ಮಲ್ಲಿಲ್ಲ ಹೀಗಾಗಿ ಶಿಸ್ತು ಬಂದಿಲ್ಲ ಎಂದು ಸಿಎಂ ಹೇಳಿದರು.

ಬೆಂಗಳೂರು(ಅ.11): ಪೌರ ಕಾರ್ಮಿಕರು ಗುಣಮಟ್ಟದ ಹಾಗೂ ಸ್ವಾಭಿಮಾನದ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಗುತ್ತಿಗೆ ಪೌರಕಾರ್ಮಿಕರ ವೇತನ ದುಪ್ಪಟ್ಟು, ಪೌರ ಕಾರ್ಮಿಕರಿಗೆ ತಲಾ 7.5 ಲಕ್ಷ ವೆಚ್ಚದಲ್ಲಿ ಗೃಹ ಭಾಗ್ಯ, ಬಿಸಿಯೂಟ, ವಿದೇಶ ಪ್ರವಾಸ ಭಾಗ್ಯ ಸೇರಿದಂತೆ ಸಾಲು-ಸಾಲು ಹೊಸ ಕಾರ್ಯಕ್ರಮ ನೀಡಿದ್ದೇವೆ. ಇದೆಲ್ಲವನ್ನೂ ಸದುಪಯೋ ಪಡಿಸಿಕೊಂಡು ಬೆಂಗಳೂರನ್ನು ಸ್ವಚ್ಛತೆಯಲ್ಲಿ ಮಾದರಿ ನಗರವನ್ನಾಗಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪೌರ ಕಾರ್ಮಿಕರಿಗೆ ಕರೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೌರಾಡಳಿತ ಇಲಾಖೆ, ಬಿಬಿಎಂಪಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಅಧ್ಯಯನ ಪ್ರವಾಸಕ್ಕಾಗಿ ಸಿಂಗಾಪುರ ತೆರಳುತ್ತಿರುವ 39 ಪೌರ ಕಾರ್ಮಿಕರ ತಂಡಕ್ಕೆ ಶುಭಾಷಯ ಕೋರಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ಸ್ವತಃ ಹೋಗಿ ವಿಶ್ವದ ಸ್ವಚ್ಛ ದೇಶಗಳಲ್ಲಿ ಒಂದಾದ ಸಿಂಗಾಪುರವನ್ನು ಗಮನಿಸಿದರೆ ನಮಗೆ ಲಾಭವಾಗಲಿದೆ. ಹೀಗಾಗಿ ಪೌರಕಾರ್ಮಿಕರು ವಿದೇಶಕ್ಕೆ ಹೋಗಿ ಬರಲಿ ಎಂದು 1 ಸಾವಿರ ಮಂದಿಗೆ ಕಳುಹಿಸುತ್ತಿದ್ದೇವೆ. ರಾಜ್ಯಾದ್ಯಂತ ವಿವಿಧ ಪಾಲಿಕೆ, ನಗರಸಭೆ, ಪುರಸಭೆ ಪೌರಕಾರ್ಮಿಕರನ್ನು ಕಳುಹಿಸಲಾಗುತ್ತಿದೆ. ಈಗಾಗಲೇ ಐದು ತಂಡಗಳ 215 ಮಂದಿ ಪ್ರವಾಸ ಹೋಗಿ ಬಂದಿದ್ದಾರೆ. 6ನೇ ತಂಡಕ್ಕೆ ಒಂದು ಬೀಳ್ಕೊಡುಗೆ ನೀಡುತ್ತಿದ್ದು ಅ.24ರಿಂದ ನಾಲ್ಕು ದಿನಗಳು ಪ್ರವಾಸ ಮಾಡಲಿದ್ದಾರೆ ಎಂದು ಹೇಳಿದರು.

ಸಿಂಗಾಪುರದಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ ತಮಿಳರ ಲಿಟಲ್ ಇಂಡಿಯಾ ಎಂಬ ಕಾಲೊನಿಯೇ ಇದೆ. ಹೀಗಾಗಿ ನಿಮಗೆ ಭಾರತಶೈಲಿ ಊಟ-ತಿಂಡಿ ವ್ಯವಸ್ಥೆ ದೊರೆಯುತ್ತದೆ. ಅಲ್ಲಿನ ಕಸ ಸಂಸ್ಕರಣಾ ಘಟಕಗಳಿಗೆ ಭೇಟಿ, ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ಸೇರಿದಂತೆ ಎಲ್ಲಾ ಖರ್ಚನ್ನು ಸರ್ಕಾರವೇ ಭರಿಸುತ್ತದೆ. ನೀವು ಅಲ್ಲಿ ಪಡೆದುಕೊಂಡ ಅನುಭವ ಬೆಂಗಳೂರನ್ನು ಸ್ವಚ್ಛ ನಗರ ಮಾಡುವ ನಿಟ್ಟಿನಲ್ಲಿ ಬೆಂಗಳೂರಿಗೆ ಲಾಭ ತರಲಿ ಎಂದು ಪೌರಕಾರ್ಮಿಕರಿಗೆ ಸಲಹೆ ನೀಡಿದರು.

ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು

ಈ ವೇಳೆ ಪೌರಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀವು ಎಂದಾದರೂ ಸಿಂಗಾಪುರ ಹೋಗುತ್ತೇವೆ ಎಂಬ ಕನಸು ಕಂಡಿದ್ದಿರಾ ಎಂದು ಪ್ರಶ್ನೆ ಮಾಡಿದರು. ಈ ವೇಳೆ ಪೌರಕಾರ್ಮಿಕರು ಇಲ್ಲ ಎಂದಾಗ ನೀವು ಕನಸು ಕಾಣದಿದ್ದರೂ ನಿಮ್ಮನ್ನು ವಿದೇಶಕ್ಕೆ ಕಳುಹಿಸುತ್ತಿದ್ದೇವೆ.ಗೌರವಯುತವಾಗಿ ಬಾಳಲು ಗೃಹಭಾಗ್ಯ, ಬಿಸಿಯೂಟ, ವೇತನ ದುಪ್ಪಟ್ಟು ಸೇರಿದಂತೆ ಹಲವು ಕಾರ್ಯಕ್ರಮ ನೀಡಿದ್ದೇವೆ. ನಮ್ಮ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಪ್ರಶ್ನಿಸಿದರು. ಈ ವೇಳೆ ಪೌರಕಾರ್ಮಿಕರು ತುಂಬಾ ಒಳ್ಳೆಯ ಸರ್ಕಾರ ಸರ್ ಎಂದು ಹೇಳಿದರು.

ಮಾಜಿ ಸಿಎಂ ಕೃಷ ಬಗ್ಗೆ ಸಿಎಂ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತಿನ ವೇಳೆ ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಹಿಂದೆ ಸರ್ಕಾರ ನಡೆಸಿದವರು ಬೆಂಗಳೂರು ಸಿಂಗಾಪುರ ಆಗುತ್ತೆ ಎಂದಿದ್ದರು. ಬೆಂಗಳೂರು ಸಿಂಗಾಪುರ ಆಯಿತಾ? ಆಗಿಲ್ಲ. ಏಕಾಏಕಿ ಬೆಂಗಳೂರನ್ನು ಸಿಂಗಾಪುರ ಮಾಡಲು ಸಾಧ್ಯವಿಲ್ಲ. ಸಿಂಗಾಪುರದಲ್ಲಿ ಎಲ್ಲದಕ್ಕೂ ಸಾರ್ವಜನಿಕರಲ್ಲಿ ಶಿಸ್ತು ಇದೆ. ನಮ್ಮಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುತ್ತೇವೆ. ಬೆಂಗಳೂರಿನ ಅರ್ಧದಷ್ಟು ವಿಸ್ತೀರ್ಣ ಹೊಂದಿರುವ ದೇಶ ಸಿಂಗಾಪುರ. ನೀವು ಹೋಗಿ ಅಲ್ಲಿನ ಸ್ವಚ್ಛತೆ ಹಾಗೂ ಅದಕ್ಕಾಗಿ ಅವರು ಪಾಲಿಸುತ್ತಿರುವ ವಿಧಾನ ನೋಡಿಕೊಂಡು ಬನ್ನಿ ಎಂದು ಪೌರಕಾರ್ಮಿಕರಿಗೆ ಸಲಹೆ ನೀಡಿದರು.

(ಸಾಂಧರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಾಟ್ಸಾಪ್ ಬಳಕೆದಾರರೇ ಎಚ್ಚರ: ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!
10 ಸಾವಿರವಲ್ಲ, 1 ಲಕ್ಷ ಕೊಟ್ರೂ ಮುಸ್ಲಿಮರು ನನಗೆ ವೋಟ್‌ ಹಾಕೋದಿಲ್ಲ: ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ