
ನವದೆಹಲಿ(ಅ.11): ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸಿದರೆ ಗುಣಮಟ್ಟದ ವಸ್ತುಗಳು ಸಿಗುತ್ತದೋ, ಇಲ್ಲವೋ ಎಂಬ ಅನುಮಾನ ಹೊಂದಿರುವ ಜನ ಇನ್ನೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹುದರಲ್ಲಿ, ದೆಹಲಿಯ 21ರ ಹರೆಯದ ಯವಕನೊಬ್ಬ ಆನ್‌ಲೈನ್ ವ್ಯವಹಾರ ನಡೆಸುವ ಜನಪ್ರಿಯ ವೆಬ್‌ತಾಣ ‘ಅಮೇಜಾನ್’ಗೇ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಸುಮಾರು 166 ಮೊಬೈಲ್ ಫೋನ್‌ಗಳನ್ನು ಖರೀದಿಸಿ, ಅವುಗಳು ಡೆಲಿವರಿಯಾದಾಗ ಖಾಲಿ ಬಾಕ್ಸ್ ಇದೆ ಎಂದು ಹೇಳಿ ಸುಮಾರು 50 ಲಕ್ಷ ರು.ಗೂ ಅಧಿಕ ಮೊತ್ತವನ್ನು ಆನ್‌ಲೈನ್ ಸಂಸ್ಥೆಯಿಂದ ಹಿಂಪಾವತಿ ಮಾಡಿಸಿಕೊಂಡ ಚಾಲಾಕಿ ಯುವಕನೊಬ್ಬ ಸೆರೆಯಾಗಿದ್ದಾನೆ. ಆತನೊಂದಿಗೆ ಆತನಿಗೆ ಸುಮಾರು ೧೪೦ ಸಿಮ್ ನೀಡಿ ಸಹಕರಿಸಿದ ವ್ಯಕ್ತಿಯೂ ಬಂಧಿತನಾಗಿದ್ದಾನೆ.
ಏಪ್ರಿಲ್-ಮೇ ನಡುವೆ ಶಿವಂ ಚೋಪ್ರಾ ಎಂಬ ಯುವಕ ಅಮೇಜಾನ್‌ನಿಂದ ಸುಮಾರು 166 ಮೊಬೈಲ್ ಫೋನ್‌ಗಳಿಗೆ ಆರ್ಡರ್ ಮಾಡುತ್ತಾನೆ. ಗಿಫ್ಟ್ ಕಾರ್ಡ್ ಮೂಲಕ ಅವುಗಳಿಗೆ ಹಣ ಪಾವತಿಸಲಾಗಿರುತ್ತದೆ, ಆದರೆ ಮೊಬೈಲ್ ಬಾಕ್ಸ್‌ಗಳು ದೊರೆತ ಬಳಿಕ, ಖಾಲಿ ಬಾಕ್ಸ್ ಇದೆ ಎಂದು ಪ್ರತಿಪಾದಿಸಿ ಹಣ ಹಿಂಪಡೆಯಲಾಗಿತ್ತು. ಅಮೇಜಾನ್ ಕೂಡಾ ಯಾವುದೇ ಸಂಶಯವಿಲ್ಲದೆ ಹಣ ಹಿಂಪಾವತಿಸಿತ್ತು. ಆದರೆ ಆಂತರಿಕ ತನಿಖೆ ನಡೆಸಿದಾಗ, ಮೊಬೈಲ್ ರವಾನೆಯಾಗಿದ್ದುದು ಖಚಿತವಾಗಿತ್ತು. ಹೀಗಾಗಿ ಕಂಪನಿ ಪರವಾಗಿ ದೂರು ದಾಖಲಿಸಲಾಗಿತ್ತು.
ಈ ರೀತಿ ವಂಚಿಸಲು ಶಿವಂ 141 ಫೋನ್ ನಂಬರ್ ಮತ್ತು 48 ಗ್ರಾಹಕ ಖಾತೆಗಳನ್ನು ಬಳಸಿದ್ದನು. ತನ್ನ ಸುತ್ತಮುತ್ತಲ ಪ್ರದೇಶದ ವಿಳಾಸಗಳನ್ನು ನೀಡಿ, ಡೆಲಿವರಿ ಸಿಬ್ಬಂದಿ ಬಂದಾಗ, ಆರೋಪಿಯು ಅವರನ್ನು ತಾನಿದ್ದಲ್ಲಿಗೆ ಕರೆಸಿಕೊಂಡು ಮೊಬೈಲ್ ಸ್ವೀಕರಿಸುತ್ತಿದ್ದ. ಬಂಧಿತನಿಂದ 19 ಮೊಬೈಲ್, 12 ಲಕ್ಷ ರು. ನಗದು ಮತ್ತು 40 ಬ್ಯಾಂಕ್ ಖಾತೆ ಪುಸ್ತಕಗಳು, ಚೆಕ್‌ಗಳನ್ನು ಪಡೆಯಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.