ದುಡ್ಡು ಕೊಡಿ, ಇಲ್ಲವೇ ಬ್ಯಾಂಕ್ಗಳಿಗೆ ರಜೆ ಕೊಡಿ : ಬ್ಯಾಂಕ್ ನೌಕರರಿಂದ ಆರ್ಬಿಐಗೆ ಒತ್ತಾಯ

By Suvarna Web DeskFirst Published Dec 5, 2016, 6:25 PM IST
Highlights

. ‘‘ಸಾಕಷ್ಟು ಪ್ರಮಾಣದಲ್ಲಿ ನೋಟುಗಳು ಮುದ್ರಣಗೊಂಡು, ಅಗತ್ಯವಿರುವಷ್ಟು ಹಣ ಸಿಗುವವರೆಗೆ ಬ್ಯಾಂಕ್‌ಗಳಿಗೆ ರಜೆ ಘೋಷಿಸಿಬಿಡಿ,’’ ಎಂದು ಅವರು ಒತ್ತಾಯಿಸಿದ್ದಾರೆ.

ನವದೆಹಲಿ(ಡಿ.5): ನೋಟುಗಳು ಅಮಾನ್ಯಗೊಂಡ ದಿನದಿಂದ ಬ್ಯಾಂಕ್‌ಗಳ ಎದುರು ಜನವೋ ಜನ. ಆದರೆ, ಗ್ರಾಹಕರಿಗೆ ಅಗತ್ಯವಿರುವಷ್ಟು ಹಣ ನೀಡಲಾಗದೆ ಹೈರಾಣಾಗಿರುವ ಬ್ಯಾಂಕ್‌ಗಳು ಮತ್ತು ಬ್ಯಾಂಕ್ ನೌಕರರು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಆಗ್ರಹವೊಂದನ್ನು ಮಾಡಿದ್ದಾರೆ. ‘‘ಸಾಕಷ್ಟು ಪ್ರಮಾಣದಲ್ಲಿ ನೋಟುಗಳು ಮುದ್ರಣಗೊಂಡು, ಅಗತ್ಯವಿರುವಷ್ಟು ಹಣ ಸಿಗುವವರೆಗೆ ಬ್ಯಾಂಕ್‌ಗಳಿಗೆ ರಜೆ ಘೋಷಿಸಿಬಿಡಿ,’’ ಎಂದು ಅವರು ಒತ್ತಾಯಿಸಿದ್ದಾರೆ.

‘‘500 ಮತ್ತು 1,000 ಮುಖಬೆಲೆಯ ನೋಟು ಅಮಾನ್ಯದ ಬಳಿಕ ಸಾರ್ವಜನಿಕರು ತಮ್ಮಲ್ಲಿನ ಹಣವನ್ನು ಠೇವಣಿ ಇರಿಸಲು, ನೋಟುಗಳ ವಿನಿಮಯ ಮತ್ತು ಹಣ ವಿತ್ ಡ್ರಾಗಾಗಿ ಬ್ಯಾಂಕ್‌ಗಳ ಬಾಗಿಲು ತೆರೆಯುವ ಮುನ್ನವೇ ಶಾಖೆಗಳೆದುರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ, ಅವರಿಗೆ ಅಗತ್ಯವಿರುವಷ್ಟು ಹಣ ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಗ್ರಾಹಕರಿಗೆ ಅಗತ್ಯವಿರುವಷ್ಟು ಹಣದ ಮುದ್ರಣವಾಗುವವರೆಗೂ 15 ದಿನ ಬ್ಯಾಂಕಿಂಗ್ ಸೇವೆಯನ್ನು ಆರ್‌ಬಿಐ ಸ್ಥಗಿತಗೊಳಿಸಬೇಕು,’’ ಎಂದು ಅಖಿಲ ಭಾರತದ ಬ್ಯಾಂಕ್ ನೌಕರರ ಸಂಘಟನೆಯ ಅಧ್ಯಕ್ಷ ಸಿಎಚ್ ವೆಂಕಟಾಚಲಂ ಆಗ್ರಹಿಸಿದ್ದಾರೆ. ಈ ಬಗ್ಗೆ ‘ದಿ ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ.

‘‘ನೋಟು ಅಮಾನ್ಯಗೊಂಡ ಬಳಿಕೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವೇತನವಾಗಿದ್ದರಿಂದ ಹಣ ಪಡೆಯಲು ನಾಗರಿಕರು ಒಂದು ವಾರದಿಂದ ದೇಶಾದ್ಯಂತ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಉದ್ದದ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಗ್ರಾಹಕರು ಎಟಿಎಂ ಮತ್ತು ಬ್ಯಾಂಕ್‌ಗಳಿಂದ 2 ಸಾವಿರ ಮುಖಬೆಲೆಯ ನೋಟುಗಳನ್ನು ಪಡೆಯುತ್ತಿದ್ದರಾದರೂ, 100 ಮತ್ತು 500 ಮುಖಬೆಲೆಯ ನೋಟುಗಳ ಕೊರತೆಯಿಂದಾಗಿ ಹಣದ ಬಿಕ್ಕಟ್ಟು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಿರುವಷ್ಟು ಹಣವನ್ನು ಬ್ಯಾಂಕ್‌ಗಳಿಗೆ ಆರ್‌ಬಿಐ ಪೂರೈಕೆ ಮಾಡುವವರೆಗೂ ಬ್ಯಾಂಕ್‌ಗಳಿಗೆ ರಜೆ ಘೋಷಿಸಬೇಕು,’’ ಎಂದು ಬ್ಯಾಂಕ್ ನೌಕರರು ಪಟ್ಟು ಹಿಡಿದಿದ್ದಾರೆ.

ಹಣ ವಿನಿಮಯ ಸಾಧ್ಯವಾಗದೆ ಬೆಂಕಿ ಹಚ್ಚಿಕೊಂಡಿದ್ದ ಮಹಿಳೆ ಸಾವು

ತಮ್ಮ ಬಳಿ ಇದ್ದ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾಗದೆ ಮನನೊಂದು ಬೆಂಕಿ ಹಚ್ಚಿಕೊಂಡಿದ್ದ ದೆಹಲಿಯ ದಿನಗೂಲಿ ಮಹಿಳೆ ರಜಿಯಾ(45) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ‘‘500ರ ಮುಖಬೆಲೆಯ 6 ನೋಟುಗಳನ್ನು ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳಲು ರಜಿಯಾ ವಿಲವಾಗಿದ್ದರು. ಬೇರೆ ಬ್ಯಾಂಕ್ ಶಾಖೆಗಳಲ್ಲಿ ಹಣ ವಿನಿಮಯಕ್ಕೆ ಯತ್ನಿಸುವ ಬದಲಿಗೆ ತನ್ನ ಪ್ರಾಣಕ್ಕೆ ತಾವೇ ಸಂಚಕಾರ ತಂದುಕೊಂಡಿದ್ದಾರೆ,’’ ಎಂದು ರಜಿಯಾ ಕುಟುಂಬಸ್ಥರು ಹೇಳಿದ್ದಾರೆ. ದೆಹಲಿ ಗೇಟ್ ಬಳಿಯ ಶಹ್ಜಮಾಲ್ ನಿವಾಸಿಯಾಗಿರುವ ರಜಿಯಾ ಸಾವಿಗೀಡಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

click me!