ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಗೆ ಹೊಸ ಹುದ್ದೆ ಬಂಪರ್?

By Web DeskFirst Published Aug 25, 2019, 10:23 AM IST
Highlights

ಸಚಿವ ಸ್ಥಾನದಿಂದ ವಂಚಿತರಾದ ಬಾಲಚಂದ್ರ ಜಾರಕಿಹೊಳಿಗೆ ಇದೀಗ ಬಿಜೆಪಿ ಸರ್ಕಾರ ಹೊಸ ಹುದ್ದೆ ಆಫರ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 

ಗೋಕಾಕ್‌ (ಆ.25):  ಹಠಾತ್‌ ರಾಜಕೀಯ ಬೆಳವಣಿಗೆಯೊಂದರಲ್ಲಿ ಕೆಎಂಎಫ್‌ ಅಧ್ಯಕ್ಷ ಹುದ್ದೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಹೆಸರು ಕೇಳಿಬಂದಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಪಕ್ಷದ ಅರಭಾವಿ ಶಾಸಕರಿಗೆ ಕೆಎಂಎಫ್‌ ಅಧ್ಯಕ್ಷಗಿರಿ ನೀಡಲು ಉತ್ಸುಕರಾಗಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

ತನ್ಮೂಲಕ ಕಾಂಗ್ರೆಸ್‌ ಶಾಸಕ ಭೀಮಾನಾಯ್‌್ಕ ಅವರ ಹೆಸರು ಇದೀಗ ಹಿನ್ನೆಲೆಗೆ ಸರಿದಿದೆ. ಈ ಮೊದಲು ಕೆಎಂಎಫ್‌ ಅಧ್ಯಕ್ಷ ಹುದ್ದೆಯ ಅಕಾಂಕ್ಷಿಯಾಗಿರುವ ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಅವರಿಗೆ ಅವಕಾಶ ದೊರೆಯದಂತೆ ಮಾಡಲು ಕಾಂಗ್ರೆಸ್‌ ಶಾಸಕ ಭೀಮಾನಾಯ್‌್ಕ ಅವರಿಗೆ ಬೆಂಬಲ ನೀಡುವ ಚಿಂತನೆಯನ್ನು ಯಡಿಯೂರಪ್ಪ ಹೊಂದಿದ್ದರು. ಆದರೆ, ಇದೀಗ ಬಾಲಚಂದ್ರ ಜಾರಕಿಹೊಳಿ ಅವರೇ ಈ ಹುದ್ದೆಯ ಆಕಾಂಕ್ಷಿಯಾಗಿರುವುದು ಮತ್ತು ಈ ಹುದ್ದೆ ನೀಡಿದರೆ ರಮೇಶ್‌ ಜಾರಕಿಹೊಳಿ ಡಿಸಿಎಂ ಹುದ್ದೆಗೆ ಬೇಡಿಕೆಯಿಡುವುದಿಲ್ಲ ಎಂಬ ಆಶ್ವಾಸನೆ ದೊರೆತ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಜಾರಕಿಹೊಳಿ ಅವರಿಗೆ ಬೆಂಬಲ ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪೂರಕವಾಗಿ ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್‌ಗೆ ಸರ್ಕಾರದಿಂದ ನಾಮ ನಿರ್ದೇಶನವನ್ನೂ ಮಾಡಲಾಗಿದ್ದು, ಕೆಎಂಫ್‌ನ ಏಳಕ್ಕೂ ಹೆಚ್ಚು ನಿರ್ದೇಶಕರು ಹಾಗೂ ಇಬ್ಬರು ಅಧಿಕಾರಿಗಳ ಬೆಂಬಲವನ್ನು ಜಾರಕಿಹೊಳಿ ಅವರಿಗೆ ದೊರಕಿಸಿಕೊಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ ಎನ್ನಲಾಗಿದೆ.

ಆ.31ರಂದು ನಡೆಯುವ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌)ದ ಚುನಾವಣೆಯಲ್ಲಿ 16 ಜನರು ಮತದಾನದ ಹಕ್ಕು ಪಡೆದಿದ್ದಾರೆ. ಅದರಲ್ಲಿ 12 ಜನರು ವಿವಿಧ ಒಕ್ಕೂಟಗಳ ಆಡಳಿತ ಮಂಡಳಿಯ ಸದಸ್ಯರಿದ್ದು, ಒಬ್ಬರು ಸರ್ಕಾರದ ನಾಮನಿರ್ದೇಶಿತ ಸದಸ್ಯರು, ಇಬ್ಬರು ಅಧಿಕಾರಿಗಳು ಮತ್ತು ಒಬ್ಬರು ಎನ್‌ಡಿಡಿಬಿ ಸದಸ್ಯರು ಸೇರಿದ್ದಾರೆ. ಈಗಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕೆಎಂಎಫ್‌ಗೆ ನಿರ್ದೇಶಕರನ್ನಾಗಿ ಸರ್ಕಾರ ನಾಮನಿರ್ದೇಶನ ಮಾಡಿರುವುದರಿಂದ ಅವರ ಸ್ಪರ್ಧೆಯೂ ಖಚಿತವಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನ ಪಡೆಯುವ ನಿಟ್ಟಿನಲ್ಲಿ ಅವರು ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇದರ ನಡುವೆ ಕೆಎಂಎಫ್‌ನಲ್ಲಿ 16 ಸ್ಥಾನಗಳ ಪೈಕಿ 7 ಜನರು ಚುನಾಯಿತ ನಿರ್ದೇಶಕರಾಗಿದ್ದು, ಇಬ್ಬರು ಅಧಿಕಾರಿಗಳು ಹಾಗೂ ನಾಮನಿರ್ದೇಶಿತ ಸದಸ್ಯರ ಸಹಿತ ಒಟ್ಟು 10 ಜನರು ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ಇನ್ನಿಬ್ಬರು ನಿರ್ದೇಶಕರ ಬೆಂಬಲವೂ ತಮಗೆ ದೊರೆಯುವ ವಿಶ್ವಾಸವನ್ನು ಬಾಲಚಂದ್ರ ವ್ಯಕ್ತಪಡಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಬಾಕಿ ಉಳಿದಿರುವ 3 ವರ್ಷ 10 ತಿಂಗಳ ಅವಧಿಯನ್ನು ಬಿಜೆಪಿ ಸರ್ಕಾರ ಪೂರ್ಣಗೊಳಿಸಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬುಧವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ನನಗೆ ಕೆಎಂಎಫ್‌ನ ಜವಾಬ್ದಾರಿಯನ್ನು ವಹಿಸುವಂತೆ ಕೇಳಿಕೊಂಡಿದ್ದೆ. ಮುಖ್ಯಮಂತ್ರಿಗಳು ನನ್ನ ಬೇಡಿಕೆಯನ್ನು ಮನ್ನಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನೀಡುವ ಭರವಸೆ ನೀಡಿದ್ದಾರೆ.

- ಬಾಲಚಂದ್ರ ಜಾರಕಿಹೊಳಿ, ಅರಭಾವಿ ಶಾಸಕ

click me!