ಕಲಬುರಗಿ ನೂತನ ವಿಮಾನ ನಿಲ್ದಾಣ ಕೇಂದ್ರಕ್ಕೆ ಹಸ್ತಾಂತರ | 181 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಾಣ | ಇನ್ನು ಮುಂದೆ ಕಲಬುರಗಿಯಿಂದ ಬೆಂಗಳೂರು, ತಿರುಪತಿ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್ ನಡುವೆ ವಿಮಾನಯಾನ ಸೇವೆ ಸಿಗಲಿದೆ
ಬೆಂಗಳೂರು (ಆ. 25): ರಾಜ್ಯ ಸರ್ಕಾರ ಕಲಬುರಗಿಯಲ್ಲಿ .181 ಕೊಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿಮಾನ ನಿಲ್ದಾಣವನ್ನು ಕೇಂದ್ರ ವಿಮಾನಯಾನ ಪ್ರಾಧಿಕಾರಕ್ಕೆ ಶನಿವಾರ ಹಸ್ತಾಂತರ ಮಾಡುವ ಮೂಲಕ ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಮತ್ತಷ್ಟು ಬಲ ಬಂದಂತಾಗಿದೆ.
ವಿಮಾನ ನಿಲ್ದಾಣ ಹಸ್ತಾಂತರದಿಂದ ಇನ್ನು ಮುಂದೆ ಕಲಬುರಗಿಯಿಂದ ಬೆಂಗಳೂರು, ತಿರುಪತಿ ಹಾಗೂ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್ ನಡುವೆ ವಿಮಾನಯಾನ ಸೇವೆ ಸಿಗಲಿದೆ.
ವಿಧಾನಸೌಧದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಕಾರ್ಯಕಾರಿ ನಿರ್ದೇಶಕ ಎನ್.ಆರ್.ಎನ್ ಸಿಂಹ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಮಂತ್ರಾಲಯದ ಪರವಾಗಿ ಭಾರತೀಯ ವಿಮಾನಯಾನ ಪ್ರಾಧಿಕಾರದ ಅರ್ಕಿಟೆಕ್ಟ್ ನಿರ್ದೇಶಕ ಎ.ಜಿ.ಜೋಷಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸಮ್ಮುಖದಲ್ಲಿ ಸಹಿ ಮಾಡುವ ಮೂಲಕ ನೂತನ ವಿಮಾನ ನಿಲ್ದಾಣವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಟಿ.ಎಂ.ವಿಜಯಭಾಸ್ಕರ್ ಅವರು, ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರ 2007ರ ಮಾಚ್‌ರ್ 27ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. ಬಳಿಕ .22 ಕೋಟಿ ಬೆಲೆಯ 742 ಎಕರೆ ಜಮೀನಿನ ಭೂಸ್ವಾಧೀನ ಪಡಿಸಿಕೊಳ್ಳಲಾಯಿತು. .181 ಕೋಟಿ ನಿರ್ಮಾಣ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ಇದುವರೆಗೆ ಒಟ್ಟಾರೆ .203 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಮೂರು ಮಾರ್ಗಗಳಲ್ಲಿ ಕಾರ್ಯಾಚರಣೆ:
ವಿಮಾನ ನಿಲ್ದಾಣದ ಕಾಮಗಾರಿಗಳು ಪೂರ್ಣಗೊಂಡು 2018ರ ಆಗಸ್ಟ್‌ನಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ನಡೆಸಲಾಗಿದೆ. ಇದೀಗ ಈ ವಿಮಾನ ನಿಲ್ದಾಣ ಕೇಂದ್ರ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ 3.0 (ಆರ್‌ಸಿಎಸ್-3.0) ಅಡಿಯಲ್ಲಿ ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗೆ ಆಯ್ಕೆಯಾಗಿದ್ದು, ಅಲಯನ್ಸ್ ಏರ್ ಮತ್ತು ಗೋದಾವತ್ ಏರ್ ಪ್ರೈ.ಲಿಮಿಟೆಡ್‌ನವರು ವಿಮಾನಯಾನ ಕಾರ್ಯಾಚರಣೆಗೆ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಕಲಬುರಗಿ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆಗಾಗಿ ಬೆಂಗಳೂರು- ಕಲಬುರಗಿ- ಬೆಂಗಳೂರು, ಕಲಬುರಗಿ- ಹಿಂಡನ್ (ಉತ್ತರ ಪ್ರದೇಶದ ಗಾಜಿಯಾಬಾದ್)- ಕಲಬುರಗಿ ಮತ್ತು ಕಲಬುರಗಿ- ತಿರುಪತಿ- ಕಲಬುರಗಿ ಮಾರ್ಗಗಳು ಆಯ್ಕೆಗೊಂಡಿವೆ ಎಂದು ವಿವರಿಸಿದರು.
ಕಲಬುರಗಿ ಸಂಸದ ಉಮೇಶ್ ಜಾಧವ್ ಮಾತನಾಡಿ, ಕೇಂದ್ರ ಸರ್ಕಾರದ ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ಧಿ, ಕಾರ್ಯಾಚರಣೆ ಹಾಗೂ ಕಾರ್ಯ ನಿರ್ವಹಣೆಯನ್ನು ಕೈಗೊಂಡಿರುವುದರಿಂದ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ದೇಶದ ಹಾಗೂ ರಾಜ್ಯ ರಾಜಧಾನಿಯೊಂದಿಗೆ ವಿಮಾನಯಾನ ಸಂಪರ್ಕವನ್ನು ಕಲ್ಪಿಸಿದಂತಾಗುತ್ತದೆ. ಜತೆಗೆ ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಈ ವೇಳೆ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ್ ಪಾಟೀಲ್ ತೇಲ್ಕೂರು, ಅವಿನಾಶ್ ಜಾಧವ್, ಮಾಜಿ ಸಚಿವ ಬಾಬೂರಾವ್ ಚಿಂಚನಸೂರು ಮತ್ತಿತರರು ಉಪಸ್ಥಿತರಿದ್ದರು.