ಸ್ವಿಜರ್ ಲ್ಯಾಂಡ್ ಗೆ ಬಂದು ಇಚ್ಛಾ ಮರಣ ಹೊಂದಿದ ಆಸ್ಟ್ರೇಲಿಯಾ ವಿಜ್ಞಾನಿ

First Published May 11, 2018, 10:49 AM IST
Highlights

ಆಸ್ಟ್ರೇಲಿಯಾದ 104 ವರ್ಷದ ವಿಜ್ಞಾನಿ ಡಾ| ಡೇವಿಡ್ ಗುಡಾಲ್ ಮೊನ್ನೆ ರಾತ್ರಿ ತಮ್ಮೆಲ್ಲಾ ಮೊಮ್ಮಕ್ಕಳು ಹಾಗೂ ಸ್ನೇಹಿತರನ್ನು ಕರೆದು ಹೋಟೆಲ್‌ನಲ್ಲಿ ಪಾರ್ಟಿ ನೀಡಿದರು. ಅಲ್ಲಿ ತಮ್ಮಿಷ್ಟದ ಮೀನು, ಚಿಪ್ಸ್, ಚೀಸ್‌ಕೇಕ್ ತಿಂದರು. ನಂತರ ‘ನಾನು ಸ್ವಿಜರ್‌ಲೆಂಡಿಗೆ ಹೋಗಿ ನಾಳೆ ಬೆಳಿಗ್ಗೆ ಸಾಯುತ್ತಿದ್ದೇನೆ’ ಎಂದು ಪ್ರಕಟಿಸಿದರು.

ಬಾಸಲ್ (ಸ್ವಿಜರ್‌ಲೆಂಡ್): ಆಸ್ಟ್ರೇಲಿಯಾದ 104 ವರ್ಷದ ವಿಜ್ಞಾನಿ ಡಾ| ಡೇವಿಡ್ ಗುಡಾಲ್ ಮೊನ್ನೆ ರಾತ್ರಿ ತಮ್ಮೆಲ್ಲಾ ಮೊಮ್ಮಕ್ಕಳು ಹಾಗೂ ಸ್ನೇಹಿತರನ್ನು ಕರೆದು ಹೋಟೆಲ್‌ನಲ್ಲಿ ಪಾರ್ಟಿ ನೀಡಿದರು. ಅಲ್ಲಿ ತಮ್ಮಿಷ್ಟದ ಮೀನು, ಚಿಪ್ಸ್, ಚೀಸ್‌ಕೇಕ್ ತಿಂದರು. ನಂತರ ‘ನಾನು ಸ್ವಿಜರ್‌ಲೆಂಡಿಗೆ ಹೋಗಿ ನಾಳೆ ಬೆಳಿಗ್ಗೆ ಸಾಯುತ್ತಿದ್ದೇನೆ’ ಎಂದು ಪ್ರಕಟಿಸಿದರು! ಅಲ್ಲಿದ್ದವರಿಗೆಲ್ಲ ಅಚ್ಚರಿಯಾಯಿತು. 

ಡಾ| ಗುಡಾಲ್ ತಾವು ಹೇಳಿದಂತೆ ಆಸ್ಟ್ರೇಲಿ  ಯಾದಿಂದ ವಿಮಾನ ಹತ್ತಿ ಸ್ವಿಜರ್‌ಲೆಂಡಿಗೆ ಬಂದು, ಗುರುವಾರ ಬೆಳಿಗ್ಗೆ ಇಲ್ಲಿನ ಬಾಸೆಲ್  ಬಳಿಯ ಲೀಸಲ್ ಎಂಬಲ್ಲಿರುವ ‘ಆತ್ಮಹತ್ಯಾ ಕ್ಲಿನಿಕ್’ನಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ಇಚ್ಛಾಮರಣ. 
ಆಸ್ಟ್ರೇಲಿಯಾದಲ್ಲಿ ದಯಾಮರಣ ಅಥವಾ ಇಚ್ಛಾಮರಣಕ್ಕೆ ಅವಕಾಶವಿಲ್ಲ. ಆದರೆ, 102  ವರ್ಷದವರೆಗೆ ಸಂಶೋಧನಾ  ಕ್ಷೇತ್ರದಲ್ಲಿ ಕೆಲಸ ಮಾಡಿ ನಿವೃತ್ತರಾದ ಡಾ| ಗುಡಾಲ್ ಅವರಿಗೆ 104 ನೇ ವರ್ಷದಲ್ಲಿ ಜೀವನ ಸಾಕು ಎನ್ನಿಸಿದೆ. ಆರೋಗ್ಯದ ಸಮಸ್ಯೆಯಿರುವುದರಿಂದ ಅವರು  ಮರಣಹೊಂದಲು ಬಯಸಿದ್ದರು. 

ಆದರೆ, ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಲಿಲ್ಲ. ಹೀಗಾಗಿ ಇಚ್ಛಾಮರಣಕ್ಕೆ ಕಾನೂನುಬದ್ಧವಾಗಿ ಅವಕಾಶವಿರುವ ಸ್ವಿಜರ್‌ಲೆಂಡ್‌ಗೆ ಬಂದು, ಆತ್ಮಹತ್ಯಾ ಕ್ಲಿನಿಕ್ ಗೆ 7 ಲಕ್ಷ ರು. (8000 ಪೌಂಡ್) ಶುಲ್ಕ ನೀಡಿ ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದಿಂದ ಇಲ್ಲಿಗೆ ಬರುವುದೂ ಸೇರಿದಂತೆ ಒಟ್ಟಾರೆ ಅವರು 9 (10 ಸಾವಿರ ಪೌಂಡ್) ಲಕ್ಷ ರು. ವೆಚ್ಚ ಮಾಡಿದ್ದಾರೆ. ಈ ಹಣವನ್ನು ಅವರು ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ್ದರು. ಲೀಸಲ್‌ನಲ್ಲಿರುವ ಕ್ಲಿನಿಕ್‌ನಲ್ಲಿ ನೆಂಬುಟಾಲ್ ಎಂಬ ತೀವ್ರ ವಿಷದ ಇಂಜೆಕ್ಷನ್ನನ್ನು ಗುಡಾಲ್ ಅವರಿಗೆ ನೀಡುವಾಗ ಬೇರೆ ಬೇರೆ ದೇಶಗಳಲ್ಲಿರುವ ಅವರ ನಾಲ್ವರು ಮೊಮ್ಮಕ್ಕಳು ಜೊತೆಗಿದ್ದರು. ಅವರ ಕಣ್ಣಲ್ಲಿ ನೀರಿತ್ತು. ಆದರೆ, ಡಾ| ಗುಡಾಲ್ ಮಾತ್ರ ಖುಷಿಯಿಂದ ಸಾವನ್ನಪ್ಪಿದರು. ನೆಂಬುಟಾಲ್ ಇಂಜೆಕ್ಷನ್ ನಿಂದ ಕೇವಲ 2 ನಿಮಿಷದಲ್ಲಿ ಮನುಷ್ಯ ಸಾವನ್ನಪ್ಪುತ್ತಾನೆ.

click me!