ಸರ್ವಪಕ್ಷ ಸಭೆಯಲ್ಲಿ ನಿರುದ್ಯೋಗ, ರೈತರ ವಿಷಯಕ್ಕೆ ಕಾಂಗ್ರೆಸ್‌ ಧ್ವನಿ

By Web Desk  |  First Published Jun 17, 2019, 9:02 AM IST

ಸರ್ವಪಕ್ಷ ಸಭೇಲಿ ನಿರುದ್ಯೋಗ, ರೈತರ ವಿಷಯಕ್ಕೆ ಕಾಂಗ್ರೆಸ್‌ ಧ್ವನಿ| ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗೂ ಒತ್ತಾಯ| ಸಂಯುಕ್ತ ವ್ಯವಸ್ಥೆಗೆ ಧಕ್ಕೆ ಸಹಿಸಲಾಗದು: ಪ್ರತಿಪಕ್ಷಗಳು


ನವದೆಹಲಿ[ಜೂ.17]: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಂಡ ಬಹುಮತದಿಂದ 2ನೇ ಅವಧಿಗೆ ಅಧಿಕಾರಕ್ಕೆ ಮರಳಿದ ಬಳಿಕ ಮೊದಲ ಬಜೆಟ್‌ ಅಧಿವೇಶನ ಸೋಮವಾರದಿಂದ ಆರಂಭವಾಗಬೇಕಿರುವ ಮುನ್ನ ದಿನವೇ, ನಿರುದ್ಯೋಗ, ರೈತರ ಸಮಸ್ಯೆಗಳು, ಮಹಿಳಾ ಮೀಸಲಾತಿ ಮಸೂದೆ, ಬರಗಾಲ, ಮುಕ್ತ ಪತ್ರಿಕಾ ಸ್ವಾತಂತ್ರ್ಯದ ಪರ ಕಾಂಗ್ರೆಸ್‌ ಧ್ವನಿಯೆತ್ತಿದೆ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದೆ.

ಬಜೆಟ್‌ ಅಧಿವೇಶನದ ಸಮಾಲೋಚನೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾನುವಾರ ಸರ್ವಪಕ್ಷಗಳ ಸಭೆ ನಡೆಯಿತು. ಈ ಸಂದರ್ಭದಲ್ಲಿ ಸಂಸತ್ತಿನ ಅಧಿವೇಶನದಲ್ಲಿ ದೇಶದಲ್ಲಿನ ಎಲ್ಲ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಅಲ್ಲದೆ, ರಾಜ್ಯಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ದೇಶದ ಸಂಯುಕ್ತ ವ್ಯವಸ್ಥೆಗೆ ಧಕ್ಕೆ ತರುವಂಥ ವಿಚಾರಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಪ್ರತಿಪಕ್ಷಗಳು ಗುಡುಗಿವೆ ಎಂದು ತಿಳಿದುಬಂದಿದೆ.

Tap to resize

Latest Videos

ಈ ವೇಳೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬೀ ಆಜಾದ್‌, ಕಾಂಗ್ರೆಸ್‌ ಸಂಸದರಾದ ಅಧಿರ್‌ ರಂಜನ್‌ ಚೌಧರಿ, ಕೆ. ಸುರೇಶ್‌, ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಹಾಗೂ ಟಿಎಂಸಿ ನಾಯಕ ಡಿರೇಕ್‌ ಒಬ್ರೇನ್‌ ಅವರು ಭಾಗವಹಿಸಿದ್ದರು.

ಏತನ್ಮಧ್ಯೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಹೀನಾಯ ಸೋಲು ಕಂಡಿರುವ ಕಾಂಗ್ರೆಸ್‌, ತನ್ನ ತತ್ವ ಸಿದ್ಧಾಂತಗಳ ಉಳಿವಿಗಾಗಿ ಹೋರಾಟ ಮುಂದುವರಿಸುವುದಾಗಿ ಹೇಳಿದೆ.

click me!