ಇಂದು ದೇಶಾದ್ಯಂತ ವೈದ್ಯರ ಮುಷ್ಕರ: ಆಸ್ಪತ್ರೆ ಬಂದ್!

Published : Jun 17, 2019, 08:52 AM ISTUpdated : Jun 17, 2019, 11:19 AM IST
ಇಂದು ದೇಶಾದ್ಯಂತ ವೈದ್ಯರ ಮುಷ್ಕರ: ಆಸ್ಪತ್ರೆ ಬಂದ್!

ಸಾರಾಂಶ

ಇಂದು ದೇಶಾದ್ಯಂತ ವೈದ್ಯರ ಮುಷ್ಕರ| ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ರವರೆಗೆ ಒಪಿಡಿ ಸೇವೆ ಸ್ಥಗಿತ| ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಹೋರಾಟ| ಮಮತಾ ಜತೆ ಸಂಧಾನಕ್ಕೆ ಮುಂದಾದ ಬಂಗಾಳ ವೈದ್ಯರು

ಕೋಲ್ಕತಾ[ಜೂ.17]: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ, ಕರ್ತವ್ಯ ನಿರತ ವೈದ್ಯರಿಗೆ ಸೂಕ್ತ ರಕ್ಷಣೆಗೆ ಆಗ್ರಹಿಸಿ ದೇಶಾದ್ಯಂತ ವೈದ್ಯರು ಸೋಮವಾರ 24 ತಾಸು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಬೆಳಗ್ಗೆ 6ರವರೆಗೆ ಹೊರರೋಗಿಗಳ ವಿಭಾಗ(ಒಪಿಡಿ) ಸೇವೆ ಸಂಪೂರ್ಣ ಬಂದ್‌ ಆಗುವುದು ನಿಶ್ಚಿತವಾಗಿದೆ.

ಈ ನಡುವೆ, ಪಶ್ಚಿಮ ಬಂಗಾಳದಲ್ಲಿ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವೈದ್ಯರು ಮೆತ್ತಗಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಸಂಧಾನಕ್ಕೆ ಇಂಗಿತ ವ್ಯಕ್ತಪಡಿಸಿದ್ದಾರೆ. ಮಮತಾ ಅವರು ಕರೆದ ಸ್ಥಳದಲ್ಲಿ ಮಾತುಕತೆಗೆ ಸಿದ್ಧ. ಆದರೆ ಆ ಮಾತುಕತೆ ಮುಕ್ತ ವಾತಾವರಣದಲ್ಲಿ ನಡೆಯಬೇಕು. ಮಮತಾ ಹೇಳಿದಂತೆ ನಾಲ್ಕು ಗೋಡೆಗಳ ಮಧ್ಯೆ ಅಲ್ಲ ಎಂದು ಷರತ್ತು ವಿಧಿಸಿದ್ದಾರೆ.

24 ತಾಸು ಮುಷ್ಕರ:

ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಸೋಮವಾರದಿಂದ 24 ತಾಸುಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿದೆ. ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಬೆಳಗ್ಗೆ 6ರವರೆಗೆ ವೈದ್ಯರು ಒಪಿಡಿ ಒಳಗೊಂಡ ತೀರಾ ಅವಶ್ಯವಲ್ಲದ ಸೇವೆಗಳಿಂದ ಹೊರಗುಳಿಯಲಿದ್ದಾರೆ. ಆದರೆ ತುರ್ತು ಹಾಗೂ ಅಪಘಾತ ಸೇವೆಗಳು ಲಭ್ಯ ಇರುತ್ತವೆ ಎಂದು ತಿಳಿಸಿದೆ.

ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಮೇಲೆ ನಡೆಯುವ ಹಲ್ಲೆ ಪ್ರಕರಣಗಳನ್ನು ಎದುರಿಸಲು ಸಮಗ್ರ ಕೇಂದ್ರೀಯ ಕಾನೂನೊಂದನ್ನು ರೂಪಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದೆ.

"

ಏತನ್ಮಧ್ಯೆ, ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ವೈದ್ಯರ ಎಲ್ಲ ಬೇಡಿಕೆ ಈಡೇರಿಸಲು ಸಿದ್ಧ. ನಾಲ್ಕು ಗೋಡೆಗಳ ನಡುವೆ ಮಾತುಕತೆ ಮಾಡೋಣ, ಸೇವೆಗೆ ಮರಳಿ ಎಂದು ಮನವಿ ಮಾಡಿದ್ದರು. ಆ ಕೋರಿಕೆಯನ್ನು ತಿರಸ್ಕರಿಸಿದ್ದ ವೈದ್ಯರು, ಭಾನುವಾರ ಮಾತುಕತೆಗೆ ಒಪ್ಪಿದ್ದಾರೆ. ಮುಕ್ತ ವಾತಾವರಣದಲ್ಲಿ ಮಾತುಕತೆ ನಡೆಯಬೇಕು ಎಂದು ತಿಳಿಸಿದ್ದಾರೆ.

ಕೋಲ್ಕತಾದ ಎನ್‌ಆರ್‌ಎಸ್‌ ಆಸ್ಪತ್ರೆಯ ಇಬ್ಬರು ಕಿರಿಯ ವೈದ್ಯರ ಮೇಲೆ ರೋಗಿಗಳ ಬಂಧುಗಳು ಕಳೆದ ಸೋಮವಾರ ರಾತ್ರಿ ಹಲ್ಲೆ ನಡೆಸಿದ್ದರು. ಮರುದಿನದಿಂದಲೇ ಬಂಗಾಳದಾದ್ಯಂತ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು. ಅದು ದೇಶಾದ್ಯಂತ ವಿಸ್ತರಣೆಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ