
ನವದೆಹಲಿ : ಹಲವು ಸುತ್ತಿನ ಮಾತುಕತೆ, ರಾಜಿ ಸಂಧಾನದ ಬಳಿಕ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ. ಆ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿದೆ.
ರಾಜಸ್ಥಾನದಲ್ಲಿ ಪಕ್ಷಕ್ಕೆ ಮರಳಿ ಅಧಿಕಾರ ದಕ್ಕಿದ ಹಿನ್ನೆಲೆಯಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಮುಖಂಡ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸಚಿನ್ ಪೈಲಟ್ ಪರ ಅವರ ಸಮುದಾಯವಾದ ಗುಜ್ಜರ್ ಜನರು ರಾಜಸ್ಥಾನದಲ್ಲಿ ಹಿಂಸೆಗೆ ಇಳಿದ ಹಿನ್ನೆಲೆಯಲ್ಲಿ ಈ ವಿಷಯ ಕಗ್ಗಂಟಾಗಿತ್ತು. ಹಲವು ಬಾರಿ ಮಾತುಕತೆ ನಡೆಸಿ, ಇಬ್ಬರ ಮನವೊಲಿಸಿದ ಕಾಂಗ್ರೆಸ್, ಇಬ್ಬರಿಗೂ ಹುದ್ದೆ ನೀಡಿದೆ.
ಗೆಹ್ಲೋಟ್ ಅವರನ್ನು ಸಿಎಂ ಹಾಗೂ ಪೈಲಟ್ ಅವರನ್ನು ಡಿಸಿಎಂ ಹುದ್ದೆಗೆ ಆಯ್ಕೆ ಮಾಡಿರುವುದನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ರಾಜಸ್ಥಾನದ ವೀಕ್ಷಕ ಕೆ.ಸಿ. ವೇಣುಗೋಪಾಲ್ ಪ್ರಕಟಿಸಿದರು.
ಮೂರನೇ ಸಲವೂ ಹೋರಾಟ: ಅಶೋಕ್ ಗೆಹ್ಲೋಟ್ ಅವರು ಚುನಾವಣೆಯಲ್ಲಿ ಪಕ್ಷ ಗೆದ್ದ ಬಳಿಕವೂ ಹೋರಾಟ ನಡೆಸಿ ಸಿಎಂ ಪಟ್ಟಕ್ಕೇರುತ್ತಿರುವುದು ಇದು ಮೂರನೇ ಬಾರಿ. 1998ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಜಾಟ್ ಸಮುದಾಯದ ನಾಯಕರು ತಮಗೇ ಸಿಎಂ ಹುದ್ದೆ ಬೇಕು ಎಂದು ಪಟ್ಟು ಹಿಡಿದಿದ್ದರು. 2008ರಲ್ಲಿ ಜಾಟ್ ಸಮುದಾಯ ಪ್ರತಿಭಟನೆ ನಡೆಸಿದ್ದರೆ, ಗೆಹ್ಲೋಟ್ ಹಾಗೂ ಕೇಂದ್ರದ ಅಂದಿನ ಸಚಿವ ಸೀಸ್ ರಾಮ್ ಓಲಾ ಬೆಂಬಲಿಗರು ಕಿತ್ತಾಡಿಕೊಂಡಿದ್ದರು. ಸೋನಿಯಾ ಮಧ್ಯಪ್ರವೇಶದ ಬಳಿಕ ಗೆಹ್ಲೋಟ್‌ಗೆ ಹುದ್ದೆ ಸಿಕ್ಕಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.