
800 ತಳಿಯ ಬತ್ತ, 120 ಜಾತಿಯ ಮಾವಿನ ಮರಗಳು, 30ಕ್ಕೂ ಹೆಚ್ಚು ವೈವಿಧ್ಯಮಯ ತರಕಾರಿ ತಳಿಗಳು...ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದ್ಯಾವುದೋ ಮ್ಯೂಸಿಯಂನಲ್ಲಿ ಇಟ್ಟಿರುವ ವಸ್ತುಗಳಲ್ಲ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಒಬ್ಬ ರೈತನ ಬಳಿ ಇರುವ ಸಂಗ್ರಹವಿದು. ಆ ಯುವ ವಿಜ್ಞಾನಿಯ ಸಾಧನೆಗೆ ಇಡೀ ಭಾರತ ಮಾತ್ರವಲ್ಲ, ಅನೇಕ ದೇಶಗಳೂ ಕೊಂಡಾಡಿವೆ.
ಸೈಯದ್ ಘನಿ ಖಾನ್ ಕಿರುಗಾವಲು ಗ್ರಾಮದ ಪ್ರಗತಿಪರ ರೈತ. ತಮ್ಮ 20 ಎಕರೆ ಜಮೀನಿನಲ್ಲಿ ಬತ್ತ ಬೆಳೆಯುತ್ತಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಮತ್ತು ಪ್ರಾಚ್ಯವಸ್ತು ವಿಷಯದಲ್ಲಿ ಬಿಎ ಪದವೀಧರರಾದ ಸೈಯದ್ಗೆ ಮ್ಯೂಸಿಯಂಗಳಲ್ಲಿ ಕ್ಯುರೇಟರ್ ಆಗುವ ಆಸೆ ಇತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಆ ಆಸೆ ಈಡೇರಲಿಲ್ಲ. ಆದರೆ, ಅದನ್ನೇ ತಮ್ಮ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡು ತಮ್ಮ ಜಮೀನನ್ನೇ ಮ್ಯೂಸಿಯಂ ಆಗಿ ಮಾರ್ಪಡಿಸಿದ್ದಾರೆ.
ಸೈಯದ್ ತಮ್ಮ 20 ಎಕರೆ ಜಮೀನಿನಲ್ಲಿ 1 ಎಕರೆ ಜಾಗವನ್ನು ಪ್ರತ್ಯೇಕವಾಗಿ ಉಳುಮೆ ಮಾಡುತ್ತಾರೆ. ಇಲ್ಲಿ ವಿಶಿಷ್ಟ ದೇಶಿ ಬೀಜಗಳನ್ನು ಪ್ರತಿ ವರ್ಷ ಬಿತ್ತಿ, ಇಳುವರಿ ತೆಗೆದು ಆ ಬೀಜಗಳನ್ನು ಸಂರಕ್ಷಿಸಿ ಇಡುತ್ತಾರೆ. ಇವರ ಜಮೀನಿಗೆ ಅನೇಕ ರೈತರು, ವಿಜ್ಞಾನಿಗಳು ಭೇಟಿ ಕೊಡುತ್ತಲೇ ಇರುತ್ತಾರೆ. ರೈತರಿಗೆ ಉಚಿತವಾಗಿ 1 ಅಥವಾ 2 ಕೆಜಿಯಷ್ಟು ಬತ್ತದ ಬೀಜಗಳನ್ನು ಕೊಡುತ್ತಾರೆ. ಅದಕ್ಕಿಂತ ಹೆಚ್ಚು ಬೇಕೆಂದರೆ, ಬೀಜ ಪಡೆದುಕೊಂಡ ರೈತ ತಾನು ಬೆಳೆದ ನಂತರ ಸೈಯದ್ ಕೊಟ್ಟ ಬೀಜದ ಎರಡು ಪಟ್ಟು ಬೀಜಗಳನ್ನು ವಾಪಸ್ ಕೊಡಬೇಕು. ಈ ಷರತ್ತು ಪೂರೈಸಿದರೆ ಮಾತ್ರ ಬೀಜ ಸಿಗುತ್ತದೆ.
ದೇಸಿ ತಳಿದ ಬತ್ತವಷ್ಟೇ ಅಲ್ಲ, ಪಾಕಿಸ್ತಾನ ಸೇರಿದಂತೆ ಅನೇಕ ವಿದೇಶಿ ತಳಿಯ ಬತ್ತದ ಬೀಜಗಳೂ ಇಲ್ಲಿವೆ. ಟಿಪ್ಪು ಸುಲ್ತಾನ್ ಕಾಲದ್ದು ಎನ್ನಲಾದ 120 ದೇಸಿ ಮಾವಿನ ಬೀಜಗಳೂ ಇವೆ. ಅಷ್ಟೇ ಅಲ್ಲ, ಸಕ್ಕರೆ ಕಾಯಿಲೆಯವರಿಗೆ ಬೇಕಾದಂತಹ ಶುಗರ್ ಫ್ರಿ ಮಾವಿನ ಸಸಿಗಳೂ ಇವೆ. 12ಕ್ಕೂ ಹೆಚ್ಚು ಕಿರುಧಾನ್ಯಗಳ ಸಂಗ್ರಹವೂ ಇವರ ಬಳಿ ಇದೆ.
1996ರಿಂದ ಬೀಜ ಸಂಗ್ರಹ ಕಾರ್ಯದಲ್ಲಿ ನಿರತರಾಗಿರುವ ಸೈಯದ್ ನಿಜವಾದ ವಿಜ್ಞಾನಿ. ಇವರಿಗಿರುವಷ್ಟ ಕೃಷಿ ಜ್ಞಾನ ಬಹುಶಃ ವಿಜ್ಞಾನಿಗೂ ಇಲ್ಲ. ಸೈಯದ್ ವಿಶೇಷತೆ ಏನೆಂದರೆ, ತಮ್ಮ ಜ್ಞಾನವನ್ನು ಇತರರಿಗೂ ಉಚಿತವಾಗಿ ಹಂಚುತ್ತಾರೆ. ದೇಸಿ ತಳಿಗಳ ಬೀಜಗಳನ್ನು ಸಂರಕ್ಷಿಸುವ ಜತೆಗೆ ಆ ಜ್ಞಾನ ಪಸರಣದಲ್ಲೂ ಮಹತ್ತರ ಪಾತ್ರ ವಹಿಸಿದ್ದಾರೆ. ಮಾದರಿ ರೈತ ವಿಜ್ಞಾನಿಯ ಸೇವಾ ಕ್ಷೇತ್ರ ಇನ್ನಷ್ಟು ವಿಸ್ತರಣೆಯಾದಲ್ಲಿ ನಮ್ಮ ರಾಜ್ಯಕ್ಕೆ, ನಮ್ಮ ದೇಶಕ್ಕೆ ಅನುಕೂಲ ಅಲ್ಲವೇ..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.