
ಎಲ್ಲಾ ಕಡೆ ಗೋ ಸಂರಕ್ಷಣೆಯದ್ದೇ ಚರ್ಚೆ, ವಿವಾದ. ಅನೇಕ ಗೋ ಸಂಘಟನೆಗಳು ಈಗ ತಲೆ ಎತ್ತಿವೆ. ಗೋವಿನ ಮಹತ್ವ ಸಾರುವ ಕೆಲಸಗಳು ಈಗ ಹೆಚ್ಚಾಗುತ್ತಿವೆ. ಆದರೆ, ಗೋವುಗಳ ಬಗ್ಗೆ ವೈಜ್ಞಾನಿಕವಾಗಿ, ಸಾರ್ವಜನಿಕವಾಗಿ ಇಷ್ಟೆಲ್ಲಾ ಮಹತ್ವದ ವಿಚಾರಗಳು ಗೊತ್ತಿಲ್ಲದ ದಿನಗಳಿಂದಲೇ ಗೋವುಗಳ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ಅಪರೂಪದ ವ್ಯಕ್ತಿಯೊಬ್ಬರ ಪರಿಚಯ ಇಲ್ಲಿದೆ.
ಚಿಕ್ಕಮಗಳೂರು ತಾಲೂಕಿನ ಮೂಡಿಗೆರೆಯಲ್ಲಿ ಸರ್ಕಾರಿ ಪಶು ಚಿಕಿತ್ಸಾಲಯವೊಂದಿದೆ. ಇದು ರಾಜ್ಯದಲ್ಲಿರುವ ನೂರಾರು ಪಶು ಚಿಕಿತ್ಸಾಲಯಗಳಂತೆಯೇ ಇತ್ತು. ಆದರೆ, ಯಾವಾಗ ಇಲ್ಲಿ ಪಶು ಪರಿವೀಕ್ಷಕರಾಗಿ ಕೃಷ್ಣರಾಜು ಕೆಲಸಕ್ಕೆ ಬಂದರೋ ಅಲ್ಲಿಂದ ಎಲ್ಲವೂ ಬದಲಾಗಿ ಹೋಯಿತು. ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಈ ಪಶು ಚಿಕಿತ್ಸಾಲಯ ಈಗ ನಿತ್ಯ ನೂರಾರು ಪ್ರವಾಸಿಗರು, ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಇದೊಂದು ಪುಣ್ಯಧಾಮವಾಗಿ, ಅಪರೂಪದ ಗೋ ಸಂಗ್ರಹಾಲಯವಾಗಿ ಪ್ರಸಿದ್ಧಿ ಪಡೆದಿದೆ.
ಮೂಡಿಗೆರೆಯವರೇ ಆದ ಕೃಷ್ಣರಾಜು ಚಿಕ್ಕಂದಿನಿಂದಲೂ ಗೋವುಗಳ ಮೇಲೆ ಅಗಾಧ ಪ್ರೀತಿ. ಬಡತನದ ದಿನಗಳಲ್ಲಿ ಗೋವುಗಳ ಸಗಣಿ ಮಾರಾಟ ಮಾಡಿ ಜೀವನ ಸಾಗಿಸಿದ್ದಾರೆ. ಆದರೆ, ಮುಂದೇ ಅದೇ ಗೋ ಕೃಪೆಯಿಂದಾಗಿ ಪಶು ಸಂಗೋಪನೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಮೂಡಿಗೆರೆಯ ದಾರದಹಳ್ಳಿ ಪಶು ಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿರುವ ಕೃಷ್ಣರಾಜು ಇಡೀ ಆಸ್ಪತ್ರೆಯನ್ನು ಗೋ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ.
ಈ ಆಸ್ಪತ್ರೆಗೆ ಹೋದರೆ ನಳನಳಿಸುವ ಗಿಡಮರಗಳು ಸ್ವಾಗತಿಸುತ್ತವೆ. ಒಳಗೆ ಹೋದೊಡನೆ ನೂರಾರು ವರ್ಷಗಳಷ್ಟು ಹಳೆಯದಾದ ಗೋ ಉಪಕರಣಗಳು, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಬುಟ್ಟಿ, ಹಗ್ಗ, ತುಪ್ಪದ ಮಡಿಕೆ ಹೀಗೆ ಅನೇಕ ವಸ್ತುಗಳನ್ನು ಇಡಲಾಗಿದೆ. ಗೋ ಮೂತ್ರದಿಂದ ತಯಾರಿಸಿದ ಔಷಧಗಳನ್ನೂ ಇಲ್ಲಿ ಕಾಣಬಹುದು. ಸಗಣಿ ಬಳಸಿ ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಗೋಬರ್ ಗ್ಯಾಸ್ ಮಾಡಲ್ ಇಲ್ಲಿದೆ. ಎಲ್ಲವನ್ನೂ ಕೃಷ್ಣರಾಜು ಖುದ್ದು ಮಾಡಿದ್ದಾರೆ. ವಸ್ತುಗಳನ್ನು ಬೇರೆ ಬೇರೆ ಕಡೆಯಿಂದ ಸಂಗ್ರಹಿಸಿ ತಂದಿಟ್ಟಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡುವ ಜನ ಮಾತ್ರವಲ್ಲ, ನೂರಾರು ವಿದ್ಯಾರ್ಥಿಗಳು, ಪಶು ವಿಜ್ಞಾನಿಗಳು ಸಹ ಬಂದು ಹೋಗುತ್ತಿದ್ದಾರೆ. ಇವರಿಗೆಲ್ಲ ಕೃಷ್ಣರಾಜು ಅಗತ್ಯ ಮಾಹಿತಿ ನೀಡಿ, ಗೋವುಗಳ ಬಗ್ಗೆ ಪ್ರೀತಿ ಮೂಡಿಸುತ್ತಿದ್ದಾರೆ. ದೇಸಿ ತಳಿಗಳ ಮಹತ್ವನ್ನು ತಿಳಿಹೇಳುತ್ತಾರೆ.
ಸರ್ಕಾರಿ ನೌಕರರು ಕೆಲಸ ಮಾಡುವುದಿಲ್ಲ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಆದರೆ, ಕೃಷ್ಣರಾಜು ತಮ್ಮ ಸರ್ಕಾರಿ ನೌಕರಿಯನ್ನು ಅದೆಷ್ಟು ಪ್ರೀತಿಯಿಂದ ಮಾಡುತ್ತಾರೆ ಎನ್ನುವುದಕ್ಕೆ ಈ ಗೋ ಮ್ಯೂಸಿಯಂ ಸಾಕ್ಷಿ. ಅವರು ತಮ್ಮ ಪಶು ಚಿಕಿತ್ಸಾಲಯವನ್ನು ಒಪ್ಪ ಓರಣವಾಗಿ ಇಟ್ಟುಕೊಂಡಿರುವ ರೀತಿಯೇ ಗೋವುಗಳ ಬಗ್ಗೆ ಅವರಿಗೆ ಇರುವ ಪ್ರೀತಿ, ಕಾಳಜಿಗೆ ಸಾಕ್ಷಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.