
ಹೈದರಾಬಾದ್[ಮೇ.08]: ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ, ಅದರಲ್ಲೂ ದಕ್ಷಿಣ ಭಾರತದ್ದೇ ಆದ ತೃತೀಯರಂಗ ಕಟ್ಟುವ ತೆಲಂಗಾಣದ ಮುಖ್ಯಮಂತ್ರಿ, ಟಿಆರ್‌ಎಸ್ ನಾಯಕ ಕೆ.ಸಿ.ಚಂದ್ರಶೇಖರ್ ರಾವ್ ಅವರ ಯತ್ನಕ್ಕೆ ಆರಂಭದಲ್ಲೇ ವಿಘ್ನ ಕಾಣಿಸಿಕೊಂಡಿದೆ. ಏ.13ರಂದು ಕೆಸಿಆರ್ ಜೊತೆ ತೃತೀಯ ರಂಗ ರಚನೆ ಕುರಿತ ಮಾತುಕತೆಗೆ ಸಮಯ ನೀಡಿದ್ದ ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ಇದೀಗ ಉಲ್ಟಾಹೊಡೆದಿದ್ದಾರೆ.
ತಾವು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ಕಾರಣ ಎಂದು ಸಭೆ ಸಾಧ್ಯವಾಗುವುದಿಲ್ಲ ಎಂದು ರಾವ್‌ಗೆ ಸ್ಟಾಲಿನ್ ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಡಿಎಂಕೆ, ಲೋಕಸಭಾ ಚುನಾವಣೆ ಫಲಿತಾಂಶ ಬರುವವರೆಗೂ ಯಾವುದೇ ಅಪಾಯ ಮೈಮೇಲೆ ಎಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೇ, ಸಭೆಯನ್ನು ರದ್ದು ಮಾಡಿದೆ ಎಂದು ಹೇಳಲಾಗುತ್ತಿದೆ.
ರಾವ್ ಅವರು ಸೋಮವಾರವಷ್ಟೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ತಿರುವನಂತಪುರದಲ್ಲಿ ಭೇಟಿ ಮಾಡಿ ಕೆಸಿಆರ್ ಸಮಾಲೋಚನೆ ನಡೆಸಿದ್ದರು. ಈ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ್ದ ವಿಜಯನ್, ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಪ್ರಾದೇಶಿಕ ಪಕ್ಷಗಳ ಪಾತ್ರದ ಬಗ್ಗೆ ರಾವ್ ಜೊತೆ ಚರ್ಚೆ ನಡೆಸಲಾಗಿತ್ತೇ ಹೊರತೂ, ಮುಂದಿನ ಪ್ರಧಾನಿ ಯಾರೆಂಬ ಬಗ್ಗೆ ಚರ್ಚೆ ನಡೆಸಿಲ್ಲ. ಅದನ್ನು ಪಲಿತಾಂಶದ ಬಳಿಕವಷ್ಟೇ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಮುಕ್ತಾಯದ ಹಂತ ತಲುಪಿರುವಾಗಲೇ ಚಂದ್ರಶೇಖರ ರಾವ್ ಕರ್ನಾಟಕ, ತೆಲಂಗಾಣ ಹಾಗೂ ಕೇರಳದಲ್ಲಿ ಬಿಜೆಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸುವ ಕೆಲಸ ಆರಂಭಿಸಿದ್ದಾರೆ. ಇನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಗುರುತಿಸಿಕೊಳ್ಳದ ಪ್ರಾದೇಶಿಕ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲಲಿವೆ. ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಒಕ್ಕೂಟ ರಚಿಸಲು ಆ ಪಕ್ಷಗಳ ಜತೆ ಟಿಆರ್‌ಎಸ್ ಸಂಪರ್ಕದಲ್ಲಿದೆ ಎಂದು ಕೆಸಿಆರ್ ಅವರ ಪುತ್ರಿ, ಸಂಸದೆ ಕೆ. ಕವಿತಾ ಅವರು ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.