ಹೈದರಾಬಾದ್'ನಲ್ಲಿ ಮಳೆ ಪರಿಸ್ಥಿತಿ ನಿಭಾಯಿಸಲು ಸೇನೆಗೆ ಬುಲಾವ್

By Internet DeskFirst Published Sep 24, 2016, 4:21 PM IST
Highlights

ಹೈದರಾಬಾದ್(ಸೆ.24):  ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಎರಡೂ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಸ್ಥಿತಿ ಸುಧಾರಣೆಗಾಗಿ ಮತ್ತು ಸಮರೋಪಾದಿಯಾಗಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಸೇನೆಯನ್ನು ಕರೆಯಿಸಿಕೊಳ್ಳಲಾಗಿದೆ. ಇದರ ಜತೆಗೆ ರಾಷ್ಟ್ರೀಯ ಪಾಕೃತಿಕ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್‌)ವನ್ನೂ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಸೇನೆಯನ್ನು ರಂಗಾರೆಡ್ಡಿ ಜಿಲ್ಲೆಯ ಅಲ್ವಾಲ್‌, ಹೈದರಾಬಾದ್‌ನ ಬೇಗಂಪೇಟ್‌, ನಿಜಾಂಪೇಟ್‌ ಮತ್ತು ಹಕೀಂಪೇಟ್‌ಗಳಿಗೆ ಕಳುಹಿಸಿಕೊಡಲಾಗಿದೆ. ಮಹಾರಾಷ್ಟ್ರದಲ್ಲೂ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಸಿಡಿಲು ಬಡಿದ ಪರಿಣಾಮ ಯೋಲಾ ಮತ್ತು ನಂದಗಾಂವ್‌ ಜಿಲ್ಲೆಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮಹಿಳೆ ಸೇರಿದಂತೆ ಮೂವರು ಅಸುನೀಗಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಪ್ರವಾಹ ಪೀಡಿತ ಗುಂಟೂರು ಜಿಲ್ಲೆಯಲ್ಲಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದರು.

ಗ್ರೇಟರ್‌ ಹೈದರಾಬಾದ್‌ ಮುನ್ಸಿಪಾಲ್‌ ಕಾರ್ಪೊರೇಷನ್‌(ಜಿಎಚ್‌ಎಂಸಿ) ಕಚೇರಿಯಲ್ಲಿ ನಿಯಂತ್ರಕ ಕೊಠಡಿ ನಿರ್ಮಾಣವನ್ನಾಗಿ ಮಾಡಿಕೊಂಡ ಸೇನೆ, ರಕ್ಷಣಾ ಕಾರ್ಯಾಚರಣೆಗೆ ಮುನ್ಸಿಪಾಲ್‌ ಕಾರ್ಪೊರೇಷನ್‌ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಸಹಕಾರ ನೀಡುವಂತೆ ಕೋರಿದೆ.

Latest Videos

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಮನವಿ ಮೇರೆಗೆ ರಕ್ಷಣಾ ಕಾರ್ಯಾಚರಣೆಗೆ 60 ಸದಸ್ಯರ ರಾಷ್ಟ್ರೀಯ ವಿಪತ್ತುದಳ ತಂಡ ಸನ್ನದ್ಧವಾಗಿದೆ. ಜತೆಗೆ ಎಲ್ಲ ಜಿಲ್ಲೆಗಳಲ್ಲಿ ನಿಯಂತ್ರಕ ಕೊಠಡಿಗಳ ಸ್ಥಾಪನೆಗೆ ಸೂಚಿಸಿರುವ ಅವರು ಮಳೆ ಸಂತ್ರಸ್ತರಿಗೆ ರಕ್ಷಣೆಗೆ ಅಗತ್ಯವಿರುವ ನೆರವು ನೀಡುವಂತೆ ಸೂಚಿಸಿದ್ದಾರೆ.

ಹೈದರಾಬಾದ್‌ನ ತಗ್ಗು ಪ್ರದೇಶಗಳಲ್ಲಿರುವ ನಗರಗಳು ಮುಳುಗಡೆಯಾಗಿದ್ದು, ಅಲ್ಲಿನ ಸಂತ್ರಸ್ತರಿಗೆ ಆಹಾರದ ಪೊಟ್ಟಣ, ನೀರು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಹೈದರಾಬಾದ್‌ ಪಾಲಿಕೆ ಒದಗಿಸುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳುವಂತೆಯೂ ಸಿಎಂ ರಾವ್‌ ವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಳೆಯಿಂದಾಗಿ ಕೆಲ ರೈಲು ಮತ್ತು ರಸ್ತೆ ಸಂಚಾರಕ್ಕೂ ಅಡ್ಡಿಯಾಗಿದೆ.

click me!