
ಹಾಂಕಾಂಗ್[ಆ.18]: ಚೀನಾ ಸ್ವಾಮ್ಯದ ಸ್ವಾಯತ್ತ ಪ್ರದೇಶ ಹಾಂಕಾಂಗ್‌ನಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಹೋರಾಟ ವಾರಾಂತ್ಯದ ದಿನವಾದ ಶನಿವಾರ ಮತ್ತಷ್ಟುತೀವ್ರ ಸ್ವರೂಪ ಪಡೆದಿದೆ. ಹಾಂಕಾಂಗ್ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ್ದು ಭಯೋತ್ಪಾದನೆಗೆ ಸಮ ಎಂದು ಸರ್ಕಾರ ಹೇಳಿದ್ದರಿಂದ ಆಕ್ರೋಶಗೊಂಡ ಹೋರಾಟಗಾರರು, ಶನಿವಾರ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಿದ್ದಾರೆ.
ಈ ಮಧ್ಯೆ ಸರ್ಕಾರದ ಪರ ಹೋರಾಟಗಾರರು ಕೂಡ ಬೀದಿಗಿಳಿದಿದ್ದು ಚೀನಾ ಧ್ವಜ ಹಾಗೂ ಚೀನಾ ಪರ ಘೋಷಣೆಗಳನ್ನು ಕೂಗಿ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ. ಹೀಗಾಗಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಂತಾರಾಷ್ಟ್ರೀಯ ಹಣಕಾಸು ಕೇಂದ್ರ ಎನಿಸಿಕೊಂಡಿರುವ ಹಾಂಕಾಂಗ್ ಬಿಕ್ಕಟ್ಟಿನಲ್ಲಿ ಸಿಲುಕಿದೆ.
ಭಾನುವಾರ ಈ ಪ್ರತಿಭಟನೆಯಲ್ಲಿ 10 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇರುವ ಕಾರಣ, ಪ್ರತಿಭಟನೆ ಮತ್ತೊಂದು ಹಂತ ಮುಟ್ಟುವ ಎಲ್ಲಾ ಲಕ್ಷಣಗಳಿವೆ. ಈ ನಡುವೆ ಹಾಂಕಾಂಗ್ ಗಡಿಯಲ್ಲೇ ಬರುವ ತನ್ನ ಶೆನ್ಜಾನ್ ನಗರದಲ್ಲಿ ಚೀನಾ ಭಾರೀ ಪ್ರಮಾಣದಲ್ಲಿ ಸೇನೆ ಜಮಾವಣೆ ಮಾಡಿದ್ದು, ಯಾವುದೇ ಸಮಯದಲ್ಲಿ ಹಾಂಕಾಂಗ್‌ನೊಳಗೆ ನುಗ್ಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಿಡಿದೆದ್ದ ಹಾಂಕಾಂಗ್ : ಚೀನಿ ಸೇನೆಯ ವೈಲೆಂಟ್ ‘ಲಾಂಗ್ ಮಾರ್ಚ್’!
ಶನಿವಾರ ದೊಡ್ಡ ಸಂಖ್ಯೆಗಳಲ್ಲಿ ಶಿಕ್ಷಕರು ಹಾಗೂ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸರ್ಕಾರಿ ಕಚೇರಿಗಳ ಮೇಲೆ ಮೊಟ್ಟೆಹಾಗೂ ಕಲ್ಲು ಎಸೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಸಂಘರ್ಷ ಉಂಟಾಗಿದ್ದು, ಪೊಲೀಸರು ಅಶ್ರುವಾಯು ಹಾಗೂ ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿದ್ದಾರೆ. ನಾವು ನಮ್ಮ ಬೇಡಿಕೆ ಈಡೇರುವವ ವರೆಗೆ ಪ್ರತಿಭಟನೆ ನಡೆಸಲಿದ್ದೇವೆ. ಚೀನಾದ ಈ ನಿಲುವು ಹೀಗೆ ಮುಂದುವರಿದರೆ ಮುಂದಿನ ಪೀಳಿಗೆಗೆ ತೊಂದರೆ ಉಂಟಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಭಾನುವಾರ ಇನ್ನೂ ಹೆಚ್ಚಿನ ಜನರು ಪ್ರತಿಭಟನೆ ನಡೆಸುವ ಸಾಧ್ಯತೆ ಇದ್ದು, ಚೀನಾ ಪ್ರತಿಭಟನೆ ಹತ್ತಿಕ್ಕಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆತಂಕ ಸೃಷ್ಠಿಯಾಗಿದೆ.
ಮಂಗಳವಾರ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರು, ಬಳಿಕ ಹಿಂಸಾತ್ಮ ರೂಪ ಅನುಸರಿಸಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ಮಧ್ಯೆ ಪ್ರತಿಭಟನೆ ನಿಯಂತ್ರಣಕ್ಕೆ ಚೀನಾ ತನ್ನ ಸೇನೆಯನ್ನು ಹಾಂಕಾಂಗ್ ಗಡಿಯತ್ತ ರವಾನಿರುವ ಬಗ್ಗೆ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿದೆ. ಚೀನಾದ ಈ ನಿಲುವು ವಿಶ್ವ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದ್ದು, ಇದರಿಂದ ಚೀನಾಗೆ ಆರ್ಥಿಕ ಹೊಡೆತ ಬೀಳಲಿದೆ ಎಂದು ಅಂದಾಜಿಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.