
ಬೆಂಗಳೂರು(ಜೂ.29): ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಮೌಢ್ಯ ನಿಷೇಧ ಕಾಯ್ದೆ ಬಹುತೇಕ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗುವುದು ಖಚಿತವಾಗಿದೆ. ಹಲವು ಅಡೆತಡೆಗಳು, ವಿರೋಧದ ಬಳಿಕ ಸಚಿವ ಸಂಪುಟ ಉಪಸಮಿತಿಯಿಂದ ಮಸೂದೆಯ ರೂಪುರೇಷೆ ಕಾನೂನು ಇಲಾಖೆಗೆ ಶಿಫಾರಸುಗೊಂಡಿದೆ. ಹಲವು ಮಹತ್ವದ ಅಂಶಗಳು ಶಿಫಾರಸಿನಲ್ಲಿ ಉಲ್ಲೇಖಗೊಂಡಿವೆ.
ರಾಜ್ಯ ಸರ್ಕಾರದ ಬಹುನಿರೀಕ್ಷಿತ ಮೌಢ್ಯ ನಿಷೇಧ ಕಾಯ್ದೆ ಜಾರಿ ಸಂಬಂಧ ಕೊನೆಗೂ ಒಂದಷ್ಟು ಬೆಳವಣಿಗೆಯಾಗಿದೆ. ಸಾಕಷ್ಟು ವಿರೋಧ, ಗೊಂದಲಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಯ್ದೆಯ ರೂಪು ರೇಷೆ ಸಿದ್ಧಗೊಂಡಿದೆ. ಈ ಸಂಬಂಧ ರಚಿತಗೊಂಡಿದ್ದ ಸಚಿವ ಸಂಪುಟ ಉಪಸಮಿತಿ ತನ್ನ ಶಿಫಾರಸುಗಳನ್ನು ಕಾನೂನು ಇಲಾಖೆಗೆ ರವಾನಿಸಿದೆ. ಬಹುತೇಕ ಮುಂದಿನ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಕಾಯ್ದೆ ಮಂಡನೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ಸಂಪುಟ ಉಪಸಮಿತಿ ಶಿಫಾರಸಿನಲ್ಲಿ ಏನಿದೆ?
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ಮೌಢ್ಯ ಪ್ರತಿಬಂಧಕ ಕಾಯ್ದೆ ಕುರಿತ ಸಂಪುಟ ಉಪಸಮಿತಿ ಹಲವು ಪ್ರಮುಖ ಶಿಫಾರಸುಗಳನ್ನ ಮಾಡಿದೆ. ಅವುಗಳಲ್ಲಿ ಪ್ರಮುಖವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಆದ್ಯತೆ ನೀಡುವಿಕೆ, ಜ್ಯೋತಿಷಿಗಳಿಗೆ ಕಡಿವಾಣ ಹಾಕುವ ವಿಚಾರ ಕೂಡಾ ಉಲ್ಲೇಖವಾಗಿದೆ. ಇನ್ನು ದೇವರ ಹೆಸರಿನಲ್ಲಿ ಪ್ರಾಣಿ ಹಿಂಸೆ, ಮಡೆಸ್ನಾನದಂತಹ ಮೌಢ್ಯಗಳನ್ನು ನಿಷೇಧಿಸುವಂತೆಯೂ ಹೇಳಲಾಗಿದೆ. ಜತೆಗೆ ಮನುಕುಲಕ್ಕೆ ಅನಾನುಕೂಲವಾಗುವಂತಹ ವಿಚಾರಗಳು, ಕೆಲವು ಕಠೋರ ಪದ್ದತಿಗಳನ್ನು ಕೈಬಿಡಲು ಕೂಡಾ ಸೂಚಿಸಲಾಗಿದೆ.
ಒಟ್ನಲ್ಲಿ ಸಿಎಂ ಸಿದ್ರಾಮಯ್ಯ ಪದೇಪದೇ ಮೌಢ್ಯ ವಿರೋಧಿ ಕಾಯ್ದೆ ಜಾರಿ ಬಗ್ಗೆ ಹೇಳ್ತಿದ್ರು. ಇವಾಗ ಕಾಗೋಡು ತಿಮ್ಮಪ್ಪ ನೇತೃತ್ವದ ಸಂಪುಟ ಉಪಸಮಿತಿ ಮಾಡಿರೋ ಶಿಫಾರಸುಗಳನ್ನ ಒಳಗೊಂಡ ವಿಧೇಯಕ ಮುಂಬರೋ ಅಧಿವೇಶನದಲ್ಲಿ ಮಂಡನೆಯಾಗುವ ಭರವಸೆ ವ್ಯಕ್ತವಾಗಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.