ರಾಜ್ಯದಲ್ಲಿ ಅಕ್ಟೋಪಸ್ ಪಡೆ ರಚನೆ?

Published : Aug 28, 2018, 07:52 AM ISTUpdated : Sep 09, 2018, 09:03 PM IST
ರಾಜ್ಯದಲ್ಲಿ ಅಕ್ಟೋಪಸ್ ಪಡೆ ರಚನೆ?

ಸಾರಾಂಶ

ಮತೀಯ ಸಂಘಟನೆಗಳ ಚಟುವಟಿಕೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ನಡೆಯುವ ವಿಚಾರವಾದಿಗಳ ಹತ್ಯೆಗಳು ಹಾಗೂ ಭಯೋತ್ಪಾದಕ ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ತಾಳಿರುವ ಉದಾಸೀನತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶೇಷ ತನಿಖಾ ದಳವು ಈ ರೀತಿಯ ಚಟುವಟಿಕೆಗಳ ಮೇಲೆ ನಿಗಾಕ್ಕೆ ಹಾಗೂ ತನಿಖೆಗೆ ಎಸ್‌ಐಟಿ ಹೊರತಾದ ಪ್ರತ್ಯೇಕ ಪಡೆ ಅಗತ್ಯವಿದೆ ಎಂದು ಎಸ್ ಐ ಟಿ ಹೇಳಿದೆ. 

ಬೆಂಗಳೂರು :  ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಗಳನ್ನು ಸೆರೆ ಹಿಡಿಯುವ ಮೂಲಕ ದೇಶದಲ್ಲಿ ಹರಡಿದ್ದ ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಾಗಿ ವಿಚಾರವಾದಿಗಳ ಹತ್ಯೆ ಜಾಲದ ‘ವ್ಯೂಹ’ ಛಿದ್ರಗೊಳಿಸುವಲ್ಲಿ ಯಶಸ್ವಿಯಾದ ಎಸ್‌ಐಟಿ, ಈಗ ತೆಲಂಗಾಣ/ಆಂಧ್ರಪ್ರದೇಶದ ‘ಅಕ್ಟೋಪಸ್‌’ ಮಾದರಿಯಲ್ಲಿ ರಾಜ್ಯದಲ್ಲಿ ಉಗ್ರ ನಿಗ್ರಹ ಪಡೆ ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳುವ ವರದಿ ನೀಡಿದೆ.

ಮತೀಯ ಸಂಘಟನೆಗಳ ಚಟುವಟಿಕೆ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ನಡೆಯುವ ವಿಚಾರವಾದಿಗಳ ಹತ್ಯೆಗಳು ಹಾಗೂ ಭಯೋತ್ಪಾದಕ ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ತಾಳಿರುವ ಉದಾಸೀನತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶೇಷ ತನಿಖಾ ದಳವು (ಎಸ್‌ಐಟಿ), ತನಿಖಾ ಸುಧಾರಣೆ ಸಂಬಂಧ ಹಿರಿಯ ಅಧಿಕಾರಿಗಳಿಗೆ ಸಮಗ್ರ ವರದಿ ಸಲ್ಲಿಸಿದೆ.

ಗೌರಿ ಕೊಲೆ ಪ್ರಕರಣದ ತನಿಖೆಗಿಳಿದಾಗ ತನಗೆ ಎದುರಾದ ಸಮಸ್ಯೆಗಳ ಬಗ್ಗೆ ವಿವರಿಸಿರುವ ಎಸ್‌ಐಟಿ, ತನಿಖಾ ಸೂಕ್ಷ್ಮತೆ ಅರಿಯುವಲ್ಲಿ ಅಧಿಕಾರಿಗಳು ಎಡುವುವುದು ದೂರಗಾಮಿ ಪರಿಣಾಮ ಬೀರುತ್ತಿದೆ. ಹೀಗಾಗಿ ಅಪರಾಧ ಪ್ರಕರಣದ ತನಿಖೆ ಮಾತ್ರವಲ್ಲದೆ ಶಂಕಿತ ಸಂಘಟನೆಗಳ ಮೇಲೆ ಕಣ್ಗಾವಲು ಸಹ ಬಿಗಿಯಾಗಬೇಕು ಎಂದು ಸರ್ಕಾರಕ್ಕೆ ತಿಳಿಸಿದೆ.

ದೇಶದಲ್ಲೇ ಮತೀಯ ಮತ್ತು ಭಯೋತ್ಪಾದಕ ಸಂಘಟನೆಗಳ ಪತ್ತೇದಾರಿಕೆಯಲ್ಲಿ ಹೆಸರು ಗಳಿಸಿರುವ ತೆಲಂಗಾಣ ಹಾಗೂ ಆಂಧ್ರಪ್ರದೇಶ ಪೊಲೀಸ್‌ ಮಾದರಿಯಲ್ಲಿ ನಮ್ಮಲ್ಲೂ ವ್ಯವಸ್ಥೆ ರೂಪಿಸಬೇಕಿದೆ. ಇದಕ್ಕೆ ಅಗತ್ಯವಾದ ತರಬೇತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಎಸ್‌ಐಟಿ ಹೇಳಿರುವುದಾಗಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಹೊರಗಿನ ಮಾಹಿತಿ ಮೇಲೆ ಅವಲಂಬನೆ:  ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ನಿರ್ದಿಷ್ಟಸಂಘಟನೆಗಳ ಕುರಿತ ದತ್ತಾಂಶವು ಪೊಲೀಸ್‌ ಇಲಾಖೆಯಲ್ಲಿ ಸಮಗ್ರವಾಗಿ ಲಭ್ಯವಿಲ್ಲ. ಏನಾದರೂ ಘಟನೆಗಳು ಸಂಭವಿಸಿದರೆ ಹೊರ ರಾಜ್ಯಗಳ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನೆರವು ಪಡೆಯಬೇಕಾಗುತ್ತದೆ. ಇಂತಹ ಮೂಲಭೂತ ಸಮಸ್ಯೆಗಳು ತನಿಖಾ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.

ಆದರೆ ಭಯೋತ್ಪಾದಕ ಸಂಘಟನೆಗಳ ಮೇಲೆ ನಿಗಾವಹಿಸಲೆಂದೇ ರಚಿತವಾಗಿರುವ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಗುಪ್ತದಳದ ಕಾರ್ಯನಿರ್ವಹಣೆ ಕುರಿತು ನೇರವಾಗಿ ಅಸಮಾಧಾನ ವ್ಯಕ್ತಪಡಿಸದ ಎಸ್‌ಐಟಿ, ಭವಿಷ್ಯದ ದೃಷ್ಟಿಯಿಂದ ರಾಜ್ಯದ ಮತೀಯ ಸಂಘಟನೆಗಳ ಬಗ್ಗೆ ನಿಗಾವಹಿಸುವುದು ಅಗತ್ಯವಿದೆ ಎಂದು ಸ್ಪಷ್ಟನುಡಿಗಳಲ್ಲಿ ಅಭಿಪ್ರಾಯ ತಿಳಿಸಿದೆ.

‘ನಮ್ಮ ಸಿಬ್ಬಂದಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಹೆಕ್ಕಲು ನಿಪುಣತೆ ತೋರುತ್ತಿಲ್ಲ. ಮೊದಲು ವೃತ್ತಿಪರತೆ ತೋರಿಸದೆ ಧಾವಂತದಲ್ಲಿ ಕೆಲಸ ಮಾಡುತ್ತಾರೆ. ಪ್ರಕರಣದ ಸೂಕ್ಷ್ಮತೆ ಮತ್ತು ಗಂಭೀರತೆ ಅರಿಯದೆ ತನಿಖೆ ಪೂರ್ಣಗೊಳಿಸುವ ಕಡೆಗೆ ಮಾತ್ರ ಗಮನಹರಿಸುತ್ತಾರೆ. ಇದೇ ಸಂಘಟನೆಗಳ ಕಣ್ಣಿಡಲು ಆಡಚಣೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಕ್ಟೋಪಸ್‌ ನೀಡಿದ ಮಾಹಿತಿ:  2017ರ ಸೆಪ್ಟೆಂಬರ್‌ 5 ರಂದು ನಡೆದ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ ಅಧಿಕಾರಿಗಳಿಗೆ, ರಾಜ್ಯದಲ್ಲಿ ಮತೀಯ ಹಾಗೂ ಸೈದ್ಧಾಂತಿಕ ವಿರೋಧಕ್ಕೆ ಹತ್ಯೆಗಳ ಕುರಿತು ದತ್ತಾಂಶ ಸಿಗಲಿಲ್ಲ. ಆಗ ಎಸ್‌ಐಟಿಗೆ ನೆರವಿಗೆ ಬಂದಿದ್ದು ತೆಲಂಗಾಣದ ‘ಆರ್ಗನೈಸೇಶನ್‌ ಫಾರ್‌ ಕೌಂಟರ್‌ ಟೆರರಿಸ್ಟ್‌ ಆಪರೇಷನ್‌’ (ಅಕ್ಟೋಪಸ್‌). ಹತ್ತು ವರ್ಷಗಳಲ್ಲಿ ತಾನು ಸಂಗ್ರಹಿಸಿದ್ದ ಮತೀಯ ಹಾಗೂ ಸೈದ್ಧಾಂತಿಕ ಕಾರಣಗಳಿಗೆ ನಡೆದ ಪ್ರಕರಣಗಳು ಮತ್ತು ಆರೋಪಿಗಳ ಕುರಿತು ಮಾಹಿತಿಯನ್ನು ಎಸ್‌ಐಟಿ ಜತೆಗೆ ಅಕ್ಟೋಪಸ್‌ ಹಂಚಿಕೊಂಡಿತು ಎನ್ನಲಾಗಿದೆ.

ದೇಶದ ಯಾವುದೇ ಮೂಲೆಯಲ್ಲಿ ಭಯೋತ್ಪಾದಕ ಕೃತ್ಯಗಳು, ಮತೀಯ ಗಲಾಟೆಗಳು ಹಾಗೂ ನಕ್ಸಲ್‌ ಸಂಬಂಧಿಸಿದ ಪ್ರಕರಣಗಳು ದಾಖಲಾದರೆ ತಕ್ಷಣವೇ ಅಕ್ಟೋಪಸ್‌ ತೆರಳಿ, ಆ ಪ್ರಕರಣಗಳ ವಿವರ ಪಡೆಯುತ್ತದೆ. ಅದೇ ರೀತಿ ನಮ್ಮ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತ ಕೊಲೆ, ಗೌರಿ ಲಂಕೇಶ್‌ ಹಾಗೂ ಕಲಬುರ್ಗಿ ಕೊಲೆ ಪ್ರಕರಣಗಳ ಕುರಿತು ಆ ತನಿಖಾ ಸಂಸ್ಥೆ ಮಾಹಿತಿ ಪಡೆದಿತ್ತು. ಹೀಗಾಗಿ ಅಲ್ಲಿಂದ ಮಾಹಿತಿ ಲಭಿಸಿತು ಎಂದು ಮೂಲಗಳು ಹೇಳಿವೆ.

ಈ ದತ್ತಾಂಶ ಪರಿಶೀಲನೆಗಿಳಿದಾಗಲೇ ಗೌರಿ ಹತ್ಯೆಯು ಸೈದ್ಧಾಂತಿಕ ವಿರೋಧಕ್ಕೆ ನಡೆದಿದೆ ಎಂಬ ಸಂಗತಿ ಎಸ್‌ಐಟಿಗೆ ಸ್ಪಷ್ಟವಾಯಿತು. ಅಲ್ಲದೆ, 2015ರಲ್ಲಿ ಧಾರವಾಡದಲ್ಲಿ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ನಡೆದಿತ್ತು. ಇಂತಹ ಬಹುದೊಡ್ಡ ಕೃತ್ಯ ನಡೆದ ಬಳಿಕವೂ ಪೊಲೀಸರು ಎಚ್ಚೆತ್ತುಕೊಂಡಿರಲಿಲ್ಲ. ತನಿಖಾಧಿಕಾರಿಗಳು ತನಿಖೆ ನಡೆಸಬಹುದೇ ಹೊರತು ಒಂದು ಜಾಲದ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಆ ಕೆಲಸವನ್ನು ಎಸ್‌ಐಟಿ ಹೊರತಾದ ಇಲಾಖೆಯ ಬೇರೊಂದು ಸಂಸ್ಥೆ ನಿರ್ವಹಿಸಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

2013ರಲ್ಲಿ ಮೈಸೂರಿನ ಆರ್‌ಎಸ್‌ಎಸ್‌ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಕೊಲೆ ಪ್ರಕರಣದ ಬಳಿಕ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರ ಹತ್ಯೆಯಲ್ಲಿ, ಅದರ ವಿರೋಧಿ ಮತೀಯ ಸಂಘಟನೆಯೊಂದರ ಕೈವಾಡ ಬೆಳಕಿಗೆ ಬಂದಿತು. ಆಗ ಎಚ್ಚೆತ್ತುಕೊಂಡು ಆ ಜಾಲದ ಮೇಲೆ ಕಣ್ಣಿಟ್ಟಿದ್ದರೆ ಬಂಟ್ವಾಳದ ಶರತ್‌ ಮಡಿವಾಳ, ಬೆಂಗಳೂರಿನ ರುದ್ರೇಶ್‌ ಹತ್ಯೆಗಳು ತಪ್ಪಿಸಬಹುದಿತ್ತೇನೋ. ಈ ರೀತಿ ಇಲಾಖೆಯ ನಿರ್ಲಕ್ಷ್ಯವು ಮತೀಯ ಸಂಘಟನೆಗಳ ಬೆಳವಣಿಗೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ವ್ಯವಸ್ಥಿತವಾಗಿ ಸಂಚು ರೂಪಿಸಿ ಅಪರಾಧ ಕ್ಯತ್ಯದಲ್ಲಿ ತೊಡುಗುವ ಜಾಲದ ಮೇಲೆ ವರ್ಷಗಟ್ಟಲೇ ಕಣ್ಣಿಟ್ಟು ಮಾಹಿತಿ ಕಲೆ ಹಾಕಲಾಗಿದೆ. ಅಲ್ಲದೆ ಹೊರ ರಾಜ್ಯಗಳಲ್ಲಿ ಇಂತಹ ಅಪರಾಧ ಕೃತ್ಯಗಳು ನಡೆದಾಗ ಕೂಡಲೇ ತಕ್ಷಣವೇ ತೆರಳಿ ವಿವರ ಸಂಗ್ರಹಿಸಬೇಕು. ಆದರೆ ಆ ಮಾದರಿ ಕೆಲಸವಾಗುತ್ತಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಗಳು ಹೇಳಿದ್ದಾರೆ.

ಗಿರೀಶ್‌ ಮಾದೇನಹಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಂಡ ಹಾಕಿ ಲೈಂಗಿಕ ದೌರ್ಜನ್ಯ ಕೇಸ್ ಮುಚ್ಚಿ ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು! ಏನಿದು ಪ್ರಕರಣ?
ಗ್ರೇಟರ್ ಬೆಂಗಳೂರು: ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ತಡೆ, ಬಡರೋಗಿಗಳ ನೆರವಿಗೆ ಕತ್ತರಿ?