ಮತ್ತೆ ಸಿದ್ದರಾಮಯ್ಯ ಸಿಎಂ ಆಗುವ ನಿರ್ಧಾರಕ್ಕೆ ಬದ್ಧ : ಕಾಂಗ್ರೆಸ್ ಸಚಿವ

By Web DeskFirst Published Aug 28, 2018, 7:27 AM IST
Highlights

ಸಿದ್ದರಾಮಯ್ಯ ಸಿಎಂ ಆಗುವ ವಿಚಾರಕ್ಕೆ ಇದೀಗ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಸಮನ್ವಯ ಸಮಿತಿ ನಿರ್ಧರಿಸಿದರೆ ಅದಕ್ಕೆ ನಾವೆಲ್ಲ ಬದ್ಧ ಎಂದು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರು ಹೇಳಿದ್ದಾರೆ. 

ಬೆಂಗಳೂರು : ‘ಜನ ಆಶೀರ್ವದಿಸಿದರೆ ಮತ್ತೊಮ್ಮೆ ಸಿಎಂ ಆಗುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇತ್ತೀಚೆಗೆ ಸಾಂದರ್ಭಿಕವಾಗಿ ಹೇಳಿದ ಮಾತು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದು ಸಮನ್ವಯ ಸಮಿತಿ ನಿರ್ಧರಿಸಿದರೆ ಅದಕ್ಕೆ ನಾವೆಲ್ಲ ಬದ್ಧ ಎಂದು ಸಮ್ಮಿಶ್ರ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿರುವ ಎನ್‌.ಎಚ್‌.ಶಿವಶಂಕರ ರೆಡ್ಡಿ ಸೋಮವಾರ ಹೇಳಿದ್ದರೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಸೂರ್ಯ-ಚಂದ್ರರಷ್ಟೇ ಅಲ್ಲ ಎಂದು ಬೀದರ್‌ ಶಾಸಕ ನಾರಾಯಣ ರಾವ್‌ ಹೇಳಿದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಬೆಂಕಿಗೆ ಮತ್ತಷ್ಟುತುಪ್ಪ ಸುರಿದಂತಾಗಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಇದನ್ನು ಶಮನಗೊಳಿಸುವ ನಿಟ್ಟಿನಲ್ಲಿ ಹೇಳಿಕೆ ನೀಡತೊಡಗಿದ್ದಾರೆ.

ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಸಮನ್ವಯ ಸಮಿತಿ ಚರ್ಚಿಸುವುದಿಲ್ಲ, ಅದೆಲ್ಲ ಹೈಕಮಾಂಡ್‌ ವ್ಯಾಪ್ತಿಯದ್ದು ಎಂಬರ್ಥದಲ್ಲಿ ಸ್ವತಃ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದರೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಕೂಡ ಇದೇ ರೀತಿಯ ಧ್ವನಿಯಲ್ಲಿ ಮಾತನಾಡಿದ್ದಾರೆ. ಸಮನ್ವಯ ಸಮಿತಿ ಇರುವುದು ಮೈತ್ರಿ ಒಡೆಯುವುದಕ್ಕಲ್ಲ, ಕಟ್ಟುವುದಕ್ಕೆ. ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ವಿಶ್ವನಾಥ್‌ ಹೇಳಿದ್ದಾರೆ. ಇದೇ ವೇಳೆ, ಸಮ್ಮಿಶ್ರ ಸರ್ಕಾರ ರಚನೆಗೆ ಕಾರಣಕರ್ತರೇ ಸಿದ್ದರಾಮಯ್ಯ, ಅವರು ‘ಸಿಎಂ ಆಗ್ತೇನೆ’ ಎಂದು ಹೇಳಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ ನೀಡಿದ್ದಾರೆ.

ನಾವು ಬದ್ಧ: ಇದಕ್ಕೂ ಮುನ್ನ ಚಾಮರಾಜನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ, ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಸಮನ್ವಯ ಸಮಿತಿಯು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ತೀರ್ಮಾನಿಸಿದರೆ ನಮ್ಮದೇನೂ ಅಭ್ಯಂತರ ಇಲ್ಲ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಕಾಂಗ್ರೆಸ್‌ ಚುನಾವಣೆ ಎದುರಿಸಿತ್ತು. ಬಹುಮತ ಲಭಿಸಿದ್ದರೆ ಅವರೇ ಮುಖ್ಯಮಂತ್ರಿ ಆಗುತ್ತಿದ್ದರು. ಒಂದು ವೇಳೆ ಸಮನ್ವಯ ಸಮಿತಿಯಲ್ಲಿ ಕುಮಾರಸ್ವಾಮಿ ಅವರನ್ನು ಬದಲಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದರೆ ಅದಕ್ಕೆ ಎಲ್ಲರೂ ಬದ್ಧ ಎಂದು ಪ್ರತಿಪಾದಿಸಿದರು.

ಬೀದರ್‌ ಜಿಲ್ಲೆ ಬಸವಕಲ್ಯಾಣದ ಕಾಂಗ್ರೆಸ್‌ ಶಾಸಕ ಬಿ.ನಾರಾಯಣರಾವ್‌ ಕೂಡ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದು, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದು ಸೂರ್ಯ, ಚಂದ್ರರಷ್ಟೇ ಸತ್ಯ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ದಿನಾಂಕ ಹೇಳಿದರೆ ಮಾಧ್ಯಮಗಳು ತಿರುಚಿ ಸಮಸ್ಯೆ ಸೃಷ್ಟಿಸುತ್ತವೆ. ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಗದ್ದುಗೆಗೇರುವುದಕ್ಕೆ ಕಾಲವೂ ಕೂಡಿಬಂದಿದೆ’ ಎಂದು ಹೇಳಿದ್ದಾರೆ.

ಅಪಾರ್ಥ ಬೇಡ: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಕಾರ್ಮಿಕ ಸಚಿವ ವೆಂಕಟರಮಣಪ್ಪ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.  ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಟರಮಣಪ್ಪ ಅವರು, ಸಿದ್ದರಾಮಯ್ಯ ಈ ಬಾರಿಯೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮುಂದಿನ ಬಾರಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದಿದ್ದಾರೆ ಅಷ್ಟೆ. ಆದರೆ, ಅವರ ಹೇಳಿಕೆಯನ್ನು ತಿರುಚಲಾಗಿದ್ದು, ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ. ಹಣೆ ಬರಹ ಚೆನ್ನಾಗಿದ್ದರೆ ಯಾರಾದರೂ ಮುಖ್ಯಮಂತ್ರಿ ಆಗಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಮಧ್ಯೆ, ಹುಬ್ಬಳ್ಳಿಯಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌, ಸಮ್ಮಿಶ್ರ ಸರ್ಕಾರ ರಚನೆಯಾಗಲು ಕಾರಣಕರ್ತರೇ ಸಿದ್ದರಾಮಯ್ಯ. ಅವರು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿರುವುದು ಬೇರೆ ಅರ್ಥದಲ್ಲಿ. ಅದನ್ನು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಮಿತಿ ಇರೋದು ಮೈತ್ರಿ ಒಡೆಯೋದಕ್ಕಲ್ಲ: ವಿಶ್ವನಾಥ್‌

ಹೈಕಮಾಂಡ್‌ ನಿರ್ಧರಿಸಿದಂತೆ ಜೆಡಿಎಸ್‌ಗೆ ಬೆಂಬಲ ನೀಡಿದ್ದೇವೆ.ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವ ವಿಚಾರ ಸಮನ್ವಯ ಸಮಿತಿಯಲ್ಲಿ ಚರ್ಚೆಗೆ ಬರುವುದಿಲ್ಲ, ಸಮನ್ವಯ ಸಮಿತಿ ಇರುವುದು ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸೋಕೆ.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಸಮನ್ವಯ ಸಮಿತಿ ಇರುವುದು ಒಡೆಯುವುದಕ್ಕಲ್ಲ, ಕಟ್ಟುವುದಕ್ಕೆ. ಸರ್ಕಾರ ಮತ್ತು ಮೈತ್ರಿ ಪಕ್ಷಗಳ ನಡುವೆ ಸೌಹಾರ್ದತೆ ಮೂಡಿಸುವುದಕ್ಕೆ. ಮುಂದಿನ ಐದು ವರ್ಷ ಎಚ್‌.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ.

- ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

click me!