ತೆರಿಗೆ ವಂಚನೆಯ ಜೊತೆ ಡಿಕೆಶಿ ಮೇಲೆ ಇನ್ನೊಂದು ಆರೋಪ

By Web DeskFirst Published Mar 12, 2019, 1:08 PM IST
Highlights

ಡಿಕೆಶಿಯಿಂದ ಅಕ್ರಮ ಹಣ ವರ್ಗ: ಜಾರಿ ನಿರ್ದೇಶನಾಲಯದಿಂದ ತೆರಿಗೆ ವಂಚನೆಯ ಜೊತೆ ಹೈಕೋರ್ಟ್‌ನಲ್ಲಿ ಇನ್ನೊಂದು ಆರೋಪ | ಡಿಕೆಶಿ ಅಕ್ರಮ ಹಣ ಸಚಿನ್‌ ಒಡೆತನದ ಉದ್ದಿಮೆಗಳಲ್ಲಿ ಹೂಡಿಕೆ | ಶರ್ಮಾ ಟ್ರಾನ್ಸ್‌ಪೋರ್ಟ್‌ ಮಾಲಿಕನಿಂದ ಡಿಕೆಶಿ ಹಣ ಸಾಗಣೆ | ಬೆಂಗಳೂರಿನಿಂದ ದಿಲ್ಲಿಗೆ ಹಣ ಸಾಗಿಸಿದ್ದು ರಾಜೇಂದ್ರ: ನಾವದಗಿ
 

ಬೆಂಗಳೂರು (ಮಾ. 12): ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ತೆರಿಗೆ ವಂಚನೆ ಮಾತ್ರವಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ತಿಳಿಸಿದೆ.

ದೆಹಲಿಯಲ್ಲಿ ತಮಗೆ ಸೇರಿದ ಫ್ಲ್ಯಾಟ್‌, ಮನೆ ಹಾಗೂ ಬೆಂಗಳೂರಿನ ಹಲವೆಡೆ ನಡೆದ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ. ಜಾರಿಗೊಳಿಸಿರುವ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಸಚಿವ ಡಿ.ಕೆ.ಶಿವಕುಮಾರ್‌, ಅವರ ಆಪ್ತ ಸಚಿನ್‌ ನಾರಾಯಣ್‌ ಸೇರಿದಂತೆ ಐವರು ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಗಳು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿದ್ದವು.

ವಿಚಾರಣೆ ವೇಳೆ ಇ.ಡಿ. ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ಅಕ್ರಮ ಹಣವನ್ನು ಸಕ್ರಮ ಮಾಡುವ ದುರುದ್ದೇಶದಿಂದ ಡಿ.ಕೆ.ಶಿವಕುಮಾರ್‌ ಅವರು ಹೊಸ ಹೊಸ ಉದ್ಯಮ ಸ್ಥಾಪಿಸಲು ಹಾಗೂ ಆಸ್ತಿಗಳ ಮೇಲೆ ಹೂಡಿಕೆ ಮಾಡಲು ಯೋಜಿಸಿದ್ದರು. ಆ ಮೂಲಕ ಅಕ್ರಮ ಹಣ ವರ್ಗಾವಣೆಗೆ ಉದ್ದೇಶಿಸಿದ್ದರು ಎಂದು ತಿಳಿಸಿದರು.

ಅಲ್ಲದೆ, ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ದೆಹಲಿಯ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಮತ್ತು ಆರ್‌.ಕೆ. ಪುರಂ ಫ್ಲ್ಯಾಟ್‌ಗಳಲ್ಲಿ 2017ರ ಆಗಸ್ಟ್‌ 2ರಂದು ದೊರೆತ ಹಣವನ್ನು ಹವಾಲಾ ಮೂಲಕ ಸಾಗಿಸಲಾಗಿತ್ತು. ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ಅಕ್ರಮ ಹಣವನ್ನು ಸಚಿನ್‌ ನಾರಾಯಣ್‌ ಒಡೆತನದ ಉದ್ಯಮಗಳಲ್ಲಿ ತೊಡಗಿಸಲಾಗುತ್ತಿದೆ.

ಸಚಿನ್‌ ನಾರಾಯಣ್‌ ಡಿ.ಕೆ.ಶಿವಕುಮಾರ್‌ಗೆ ಸೇರಿದ ಹಣವನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ಶರ್ಮಾ ಟ್ರಾನ್ಸ್‌ಪೋರ್ಟ್‌ ಮಾಲಿಕ ಸುನೀಲ್‌ ಕುಮಾರ್‌ ಶರ್ಮಾ ಲೆಕ್ಕವಿಲ್ಲದ ಹಣವನ್ನು ಸಂಗ್ರಹಿಸಿ ಸಾಗಿಸಿದ್ದಾರೆ. ಆ ಸಂಸ್ಥೆಯ ಉದ್ಯೋಗಿ ರಾಜೇಂದ್ರ, ಹಣವನ್ನು ಬೆಂಗಳೂರಿನಿಂದ ನವದೆಹಲಿಗೆ ಅಕ್ರಮವಾಗಿ ಸಾಗಣೆ ಮಾಡಿದ್ದಾರೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ ಹಾಗೂ ಇತರೆ ಆರೋಪಿಗಳು ತೆರಿಗೆ ವಂಚನೆ ಮಾತ್ರವಲ್ಲದೆ, ಅಕ್ರಮ ಹಣ ಸಂಗ್ರಹಣೆ ಹಾಗೂ ಸಾಗಣೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ. ಹೀಗಾಗಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ ) ಸೆಕ್ಷನ್‌ 120(ಬಿ) ಅಡಿ ಕ್ರಿಮಿನಲ್‌ ಒಳಸಂಚು ಆರೋಪ, ಐಟಿ ಕಾಯ್ದೆ ಸೆಕ್ಷನ್‌ 276(1)ಅಡಿ ತೆರಿಗೆ ವಂಚನೆ ಮತ್ತು ಸೆಕ್ಷನ್‌ 277ರಡಿ ಸುಳ್ಳು ಹೇಳಿಕೆ ನೀಡಿದ ಸಂಬಂಧ ಪ್ರಕರಣ ದಾಖಲಿಸಿರುವುದು ಸರಿಯಿದೆ ಎಂದು ಪ್ರತಿಪಾದಿಸಿದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರ ವಾದ ಮಂಡನೆ ಅಪೂರ್ಣವಾದ ಕಾರಣ ನ್ಯಾಯಪೀಠವು ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ (ಮಾ.12) ಮುಂದೂಡಿತು.

ಪ್ರಕರಣದ ಇತರೆ ಆರೋಪಿಗಳಾದ ಸುನಿಲ್‌ ಕುಮಾರ್‌ ಶರ್ಮ, ಎನ್‌.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಸಹ ತಮ್ಮ ವಿರುದ್ಧ ಇ.ಡಿ. ಜಾರಿ ಮಾಡಿದ ಸಮನ್ಸ್‌ ರದ್ದುಪಡಿಸಲು ಕೋರಿ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಆರೋಪಿಗಳ ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುತ್ತಿದೆ.

click me!