ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬಳಿಕ ಭಾರತ ತಂಡ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತೆರಳಲಿದ್ದು, ಅನಿಲ್ ಕುಂಬ್ಳೆಯೇ ಕೋಚ್ ಆಗಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ. ಆದರೆ ತಂಡದ ನೂತನ ಕೋಚ್ ಆಯ್ಕೆಯನ್ನು ಕ್ರಿಕೆಟ್ ಸಲಹಾ ಸಮಿತಿಯೇ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ನವದೆಹಲಿ (ಜೂ.12): ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬಳಿಕ ಭಾರತ ತಂಡ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ತೆರಳಲಿದ್ದು, ಅನಿಲ್ ಕುಂಬ್ಳೆಯೇ ಕೋಚ್ ಆಗಿ ಮುಂದುವರಿಯಲು ಒಪ್ಪಿಕೊಂಡಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಸ್ಪಷ್ಟಪಡಿಸಿದ್ದಾರೆ. ಆದರೆ ತಂಡದ ನೂತನ ಕೋಚ್ ಆಯ್ಕೆಯನ್ನು ಕ್ರಿಕೆಟ್ ಸಲಹಾ ಸಮಿತಿಯೇ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
‘ಆಡಳಿತ ಸಮಿತಿಯೇ ಕೋಚ್ ಆಯ್ಕೆ ಜವಾಬ್ದಾರಿ ಹೊತ್ತಿದೆ. ಕಳೆದ ವರ್ಷ ಕೇವಲ ಒಂದು ವರ್ಷದ ಅವಧಿಗೆ ಕುಂಬ್ಳೆ ಅವರನ್ನು ನೇಮಕ ಮಾಡಿದ್ದರಿಂದ ನಿಯಮಗಳನ್ನು ಪಾಲಿಸಿ ಹೊಸದಾಗಿ ಕೋಚ್ ಆಯ್ಕೆ ಮಾಡಬೇಕಿದೆ. ಆಯ್ಕೆ ಪ್ರಕ್ರಿಯೆ ತಡವಾಗಿರುವುದರಿಂದ ಕುಂಬ್ಳೆ ಅವರೇ ವಿಂಡೀಸ್ ಪ್ರವಾಸಕ್ಕೂ ಕೋಚ್ ಆಗಿರಲಿದ್ದಾರೆ’ ಎಂದು ವಿನೋದ್ ರಾಯ್ ಆಡಳಿತ ಸಮಿತಿ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ‘ಸಲಹಾ ಸಮಿತಿ ಸದಸ್ಯರು ಸದ್ಯ ಲಂಡನ್‌ನಲ್ಲಿದ್ದು, ಅಲ್ಲೇ ಸಭೆ ನಡೆಸಲಿದ್ದಾರೆ’ ಎಂದು ಅವರು ಹೇಳಿದ್ದರು.
ಚಾಂಪಿಯನ್ಸ್ ಟ್ರೋಫಿ ಮುಗಿಯುತ್ತಿದ್ದಂತೆ ಭಾರತ ತಂಡ 5 ಏಕದಿನ ಹಾಗೂ ಏಕೈಕ ಟಿ20 ಪಂದ್ಯದ ಸರಣಿಯನ್ನಾಡಲು ವೆಸ್ಟ್‌ಇಂಡೀಸ್‌ಗೆ ತೆರಳಲಿದೆ. ಜೂನ್ 23 ಕ್ಕೆ ಏಕದಿನ ಸರಣಿ ಆರಂಭಗೊಳ್ಳಲಿದೆ.
ರಾಮಚಂದ್ರ ಗುಹಾ ರಾಜೀನಾಮೆ ಬಳಿಕ ೩ ಸದಸ್ಯರಿಗೆ ಇಳಿದಿರುವ ಆಡಳಿತ ಸಮಿತಿ, ಸೋಮವಾರ ಇಲ್ಲಿ ದೀರ್ಘಾವಧಿ ಸಭೆ ನಡೆಸಿತು. ಕೋಚ್ ಆಯ್ಕೆ ಪ್ರಕ್ರಿಯೆ ವಿಚಾರದಲ್ಲಿ ಬಿಸಿಸಿಐ ನಡೆದುಕೊಳ್ಳುತ್ತಿರುವ ರೀತಿ ಸರಿಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಯ್ ‘ಈ ಸಂಬಂಧ ವಿಪರೀತವಾಗಿ ಚರ್ಚೆಗಳಾಗುತ್ತಿವೆ. ನಾಯಕ ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಮನಸ್ತಾಪ ವರದಿಗಳು ಸರಿಯಲ್ಲ. ಬಿಸಿಸಿಐ ನಿಯಮ ಪಾಲಿಸುತ್ತಿದೆ ಅಷ್ಟೆ. ನಾನು ಕೊಹ್ಲಿ ಹಾಗೂ ಕುಂಬ್ಳೆ ಇಬ್ಬರೊಂದಿಗೂ ಮಾತನಾಡಿದ್ದೇನೆ. ಇಬ್ಬರೂ ಸಹ ಮನಸ್ತಾಪದ ಕುರಿತು ಏನೂ ಹೇಳಿಲ್ಲ’ ಎಂದು ಹೇಳಿದರು.
ಸಾಮಾನ್ಯ ಸಭೆಯಲ್ಲಿ ಕೋಚ್ ಬಗ್ಗೆ ಚರ್ಚೆ ಇಲ್ಲ: ಜೂನ್ 26 ರಂದು ನಡೆಯಲಿರುವ ಬಿಸಿಸಿಐ ವಿಶೇಷ ಸಾಮಾನ್ಯ ಸಭೆಯಲ್ಲಿ ಕೋಚ್ ಆಯ್ಕೆ ಬಗ್ಗೆ ಚರ್ಚೆ ನಡೆಯುವುದಿಲ್ಲ. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಕುರಿತು ಮಾತ್ರ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜತೆಗೆ ಮೇ ೨೯ರಂದು ದುಬೈನಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜತೆ ದ್ವಿಪಕ್ಷೀಯ ಸರಣಿಗೆ ಸಂಬಂಧಿಸಿದಂತೆ ನಡೆದ ಸಭೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.