ಅಧಿಕಾರದ ಶಕ್ತಿ ಸತ್ಯವನ್ನು ಸುಮ್ಮನಿರುಸಲು ಯತ್ನಿಸುತ್ತಿದೆ.. ಆದ್ರೆ, ಸತ್ಯದ ಶಕ್ತಿಯೇ ಉಳಿಯಬೇಕು. ಸತ್ಯ ಹೇಳಲು ಹೆದರದಿರಿ. ಹೀಗಂತ ರಾಹುಲ್ಗಾಂಧಿ ಹೇಳಿದ್ದಾರೆ.. ಬೆಂಗಳೂರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ರೀಲಾಂಚ್ ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಬೆಂಗಳೂರು(ಜೂನ್ 12): ದಶಕಗಳ ಕಾಲ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮರುಜನ್ಮ ಪಡೆದಿದೆ. ಇಲ್ಲಿಯ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮರುಲೋಕಾರ್ಪಣೆ ಮಾಡಿದ್ರು. ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಸತ್ಯದ ಶಕ್ತಿಯನ್ನ ಹೊಸಕಿ ಹಾಕಲು ಅಧಿಕಾರದ ಶಕ್ತಿ ಪ್ರಯತ್ನಿಸುತ್ತಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.
ಅಲ್ಲದೇ, ಭಾರತ ಇಂದು ಕವಲು ದಾರಿಯಲ್ಲಿದೆ. ಸತ್ಯದ ಶಕ್ತಿ ಹಾಗೂ ಅಧಿಕಾರದ ನಡುವೆ ಸತ್ಯವೇ ಗೆಲ್ಲಬೇಕು. ಸತ್ಯವನ್ನ ಹೇಳಲು ಹೆದರದಿರಿ. ಭಾರತದಲ್ಲಿ ಸಹಸ್ರಾರು ಪತ್ರಕರ್ತರಿಗೆ ತಾವೇನು ಬರೆಯಬೇಕೋ ಅದನ್ನ ಬರೆಯಲು ಅವಕಾಶ ಕೊಡ್ತಿಲ್ಲ. ಮಾದ್ಯಮಗಳ ಮೇಲೆ ಹಾಗೂ ವಿಪಕ್ಷಗಳ ಮೇಲೆ ದಾಳಿ ನಡೆಯುತ್ತಿದೆ. ಇತ್ತೀಚಿಗೆ ನಾನು ಮಧ್ಯಪ್ರದೇಶಕ್ಕೆ ಹೋದಾಗ ನನ್ನನ್ನು ತಡೆದರು. ಇದು ಇವತ್ತಿನ ಇಂಡಿಯಾ, ಇದೇ ಇಂದಿನ ಇಂಡಿಯಾದ ವಾಸ್ತವ ಅಂತ ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ರು.
ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ರಾಜ್ಯ ಕರ್ನಾಟಕ. ಈಗ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮರುಜನ್ಮವೂ ಇಲ್ಲೇ ಆಗಿರೋದು ಕಾಕತಾಳೀಯವೇನೂ ಅಲ್ಲ ಅಂದ್ರು.
ಒಟ್ಟಾರೆ, ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನ ಬೆಂಗಳೂರಿನಲ್ಲೇ ರೀಲಾಂಚ್ ಮಾಡುವ ಮೂಲಕ ರಾಹುಲ್ ಗಾಂಧಿ ಪಕ್ಷವನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ಲಾಂಚ್ ಮಾಡುವ ಮಾರ್ಗಕ್ಕೆ ಕರ್ನಾಟಕವೇ ಕೇಂದ್ರ ಸ್ಥಾನವಾಗಲಿದೆ ಎಂಬ ಪರೋಕ್ಷ ಸಂದೇಶವನ್ನೂ ರವಾನಿಸಿದ್ದಾರೆ.
- ವೀರೇಂದ್ರ ಉಪ್ಪುಂದ್ರ, ಪೊಲಿಟಿಕಲ್ ಬ್ಯೂರೋ, ಸುವರ್ಣನ್ಯೂಸ್