
ನಾಸಿಕ್[ಡಿ.03]: ಈರುಳ್ಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೇ ಇರುವುದಕ್ಕೆ ಮಹಾರಾಷ್ಟ್ರದ ರೈತನೋರ್ವ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದರ ಪ್ರತಿಭಟನೆ ಅಂಗವಾಗಿ 750 ಕೇಜಿ ಈರುಳ್ಳಿ ಮಾರಾಟದಿಂದ ಬಂದ 1064 ರು. ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
ಈ ಬಗ್ಗೆ ಭಾನುವಾರ ಮಾತನಾಡಿದ ರೈತ ಸಂಜಯ್ ಸಾಥೆ, ‘ನಾನು 750 ಕೇಜಿ ಈರುಳ್ಳಿ ಬೆಳೆದಿದ್ದೇನೆ. ಆದರೆ, ಮಾರುಕಟ್ಟೆಯಲ್ಲಿ ಪ್ರತೀ ಕೆಜಿ ಈರುಳ್ಳಿಗೆ 1 ರು.ಗೆ ಕೇಳಲಾಗುತ್ತಿದೆ. ಕೊನೆಗೆ 1.40 ರು. ಪ್ರಕಾರ 750 ಕೆಜಿ ಈರುಳ್ಳಿ ಮಾರಾಟದಿಂದ ಕೇವಲ 1,064 ರು. ಸಂಪಾದಿಸಿದ್ದೇನೆ. ಈ ಹಣವನ್ನು ಪ್ರಧಾನಿ ಕಚೇರಿಯ ವಿಪತ್ತು ಪರಿಹಾರ ನಿಧಿಗೆ ಕಳುಹಿಸಿದ್ದೇನೆ. ಮನಿ ಆರ್ಡರ್ ಕಳುಹಿಸಲು ₹ 54 ಶುಲ್ಕ ತಗುಲಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ನಮ್ಮ ಕುರಿತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಕೋಪವಿದೆ ಎಂದು ಹೇಳಿದ್ದಾರೆ.
2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತ ಭೇಟಿ ವೇಳೆ ಅವರ ಜೊತೆ ಸಮಾಲೋಚನೆಗೆ ಕೇಂದ್ರ ಕೃಷಿ ಇಲಾಖೆಯಿಂದ ಆಯ್ಕೆಯಾದ ಪ್ರಗತಿಪರ ರೈತರ ಪೈಕಿ ಮಹಾರಾಷ್ಟ್ರದ ನಿಶಾಕ್ ಜಿಲ್ಲೆಯ ನಿಫಾದ್ ತಾಲೂಕಿನ ನಿವಾಸಿ ಸಂಜಯ್ ಸಾಥೆ ಅವರು ಸಹ ಒಬ್ಬರಾಗಿದ್ದರು.
ಈ ಕುರಿತಾಗಿ ಮಾತನಾಡಿದ ರೈತ ಸಂಜಯ್ "ಭಾರತದ ಶೇ.50 ರಷ್ಟು ಈರುಳ್ಳಿಯನ್ನು ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಎಂಟು ವರ್ಷಗಳ ಹಿಂದೆ ಒಬಾಮಾ ಜತೆಗೆ ತಾವು ಟೆಲಿಕಾಂ ಆಯೋಜಕರ ಧ್ವನಿ ಆಧಾರಿತ ಸಲಹಾ ಸೇವೆ ಮೂಲಕ ಅವರೊಂದಿಗೆ ಮಾತನಾಡಿದ್ದೆ. ಆಗ ಹವಾಮಾನ ಬದಲಾವಣೆ ನಡುವೆಯೂ ತಾನು ಹೆಚ್ಚು ಇಳುವರಿ ಪಡೆದ ಬಗ್ಗೆ ತಿಳಿಸಿದ್ದೆ" ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ