
ಬೆಂಗಳೂರು(ಮಾ.22): ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ನಡೆದ ಮೂರನೇ ಸುತ್ತಿನ ಮಾತುಕತೆ ಮುರಿದುಬಿದ್ದಿದ್ದು, ಕಾರ್ಯಕರ್ತೆಯರು ಪ್ರತಿಭಟನೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
'ನಾವು ಸರ್ಕಾರಕ್ಕೆ ಬೇಡಿಕೆಯನ್ನು ಕೊಟ್ಟಿದ್ದೇವೆ. ಸರ್ಕಾರ ನಮಗೆ ಹೋರಾಟ ಮಾಡಲು ಹಕ್ಕಿಲ್ಲ ಎಂದರೆ ನಾವು ನಿಲ್ಲಿಸುತ್ತೇವೆ. ಆದರೆ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಹುನ್ನಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ. ಕೆಲವು ವ್ಯಕ್ತಿಗತ ಸಂಘಟನೆಗಳು ಅಪ ಪ್ರಚಾರ ಮಾಡುತ್ತಾ ಇದ್ದಾರೆ. ಸಿಐಟಿಯು ಮುಂದಾಳತ್ವದಲ್ಲಿ ಮತ್ತೆ ಹೋರಾಟ ಮುಂದುವರೆಯುತ್ತದೆ ಎಂದು ಕಾಯ೯ಕತ೯ರ ಸಂಘದ ಅಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.
ನಾಳೆಯಿಂದ ಅಂಗನವಾಡಿ ಸ್ಥಗಿತ: ಹೋರಾಟವನ್ನುಹಿಂದಕ್ಕೆ ತಗೆದುಕೊಂಡಿದ್ದೇವೆ ಎಂದು ಹೋರಾಟಕ್ಕೆ ಬಂದಾಗಿನಿಂದ ಎರಡನೇ ಬಾರಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನಾಳೆಯಿಂದ ಅಂಗನವಾಡಿ ಸ್ಥಗಿತಗೊಳ್ಳಲಿದೆ. ಅವರು ನಮ್ಮ ಒಗ್ಗಟ್ಟನ್ನ ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿ ಮಾಡುವವರಿಗೆ ನಮ್ಮ ಧನ್ಯವಾದ. ಆದರೆ ಯಾವುದೇ ಕಾರಣಕ್ಕೂ ನಾವು ಹೋರಾಟವನ್ನು ಕೈಬಿಡಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಧರಣಿಯ ಬಗ್ಗೆ ಲೋಕಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾಪವಾಯಿತು. ಸಂಸದ ಮುದ್ದಹನುಮೇಗೌಡ ಅವರು ವಿಷಯ ಪ್ರಸ್ತಾಪಿಸಿ ನಗರದಲ್ಲಿ ಕಳೆದ 2 ದಿನಗಳಿಂದ ವೇತನ ಹೆಚ್ಚಳ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮಕ್ಕಳ ಸಮೇತ ಧರಣಿ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಂಗನವಾಡಿ ನೌಕರರ ಸ್ಥಿತಿ ಬಹಳ ಕೆಟ್ಟದಾಗಿದೆ. ಕೇಂದ್ರ ಸರ್ಕಾರ ನೌಕರರ ವೇತನದ ಶೇ.90ರಷ್ಟು ಹಣ ನೀಡುತ್ತಿತ್ತು.
ಆದರೇ ಈಗ ವೇತನದ ಶೇ.60ರಷ್ಟು ಹಣ ಮಾತ್ರ ನೀಡಲಾಗುತ್ತಿದೆ. ವೇತನದ ಶೇ.40ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಮೊದಲಿನಂತೆ ಶೇ.90ರಷ್ಟು ಹಣ ನೀಡುವುದರ ಜೊತೆ ವೇತನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುದ್ದಹನುಮೇಗೌಡ ಅವರು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.