ಬಿಎಸ್‌ವೈಗೆ ಸಿಎಂ ಹುದ್ದೆ ತಪ್ಪಿಸಲು ಲಿಂಗಾಯತ ತಂತ್ರ

By Suvarna Web DeskFirst Published Mar 27, 2018, 8:33 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಲಿಂಗಾಯತರಿಗೆ ಅಲ್ಪಸಂಖ್ಯಾತರ ಪಟ್ಟಕಟ್ಟುವ ಯೋಜನೆ ಮೂಲಕ ಬಿ.ಎಸ್‌.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ.

ತಿಪಟೂರು/ತೀರ್ಥಹಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಲಿಂಗಾಯತರಿಗೆ ಅಲ್ಪಸಂಖ್ಯಾತರ ಪಟ್ಟಕಟ್ಟುವ ಯೋಜನೆ ಮೂಲಕ ಬಿ.ಎಸ್‌.ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಸೋಮವಾರ ತಿಪಟೂರಿನಲ್ಲಿ ತೆಂಗು ಬೆಳೆಗಾರರ ಸಮಾವೇಶ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಬ್ರಿಟಿಷರಂತೆ ಒಡೆದು ಆಳುವ ನೀತಿ ಅನುಸರಿಸಿ ಹೊಸ ತಂತ್ರ ರೂಪಿಸಿದ್ದಾರೆ. ಈಗ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಪಟ್ಟಕಟ್ಟಲು ಹೊರಟಿರುವ ಅವರು ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ನದೇ ಸರ್ಕಾರವಿದ್ದಾಗ ಏಕೆ ಆ ಸ್ಥಾನಮಾನ ನೀಡಲಿಲ್ಲ ಎಂದು ಶಾ ಪ್ರಶ್ನಿಸಿದರು.

ಕಾಂಗ್ರೆಸ್‌ ಹಡಗು ಮುಳುಗುತ್ತಿದೆ. ಹೇಗಾದರೂ ಮಾಡಿ ಬಚಾವಾಗಲೆಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಕಾಲು ಬಡಿಯುತ್ತಿದ್ದಾರೆ. ಇದಕ್ಕಾಗಿಯೇ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಈ ಚುನಾವಣೆಯಲ್ಲಿ ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ, ಚುನಾವಣೆ ನಂತರವೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಲಿದ್ದಾರೆ. ಸಿದ್ದರಾಮಯ್ಯನವರು ಮಂಕುಬೂದಿ ಎರಚುತ್ತಿದ್ದಾರೆ. ಇದಕ್ಕೆಲ್ಲ ಯಾರೂ ಬಲಿಯಾಗಬಾರದು ಎಂದರು.

ಕಾಂಗ್ರೆಸ್‌ ಟ್ರಾನ್ಸ್‌ಫಾರ್ಮರ್‌ ಕಿತ್ಹಾಕಿ: ಇದೇ ವೇಳೆ, ಸಿದ್ದರಾಮಯ್ಯ ಸರ್ಕಾರವನ್ನು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗೆ ಹೋಲಿಸಿದ ಅಮಿತ್‌ ಶಾ ಅವರು ‘ಈ ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋಗಿದೆ. ಅದನ್ನು ಬದಲಿಸುವುದಲ್ಲ, ಕಿತ್ತುಹಾಕಿ. ಹೊಸ ಬಿಜೆಪಿ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ’ ಎಂದು ಹೇಳಿದರು.

ಒಂದು ದೊಡ್ಡ ವಿದ್ಯುತ್‌ ಉತ್ಪಾದನಾ ಕೇಂದ್ರದಿಂದ ವಿದ್ಯುತ್ತನ್ನು ಹೈಟೆನ್ಷನ್‌ ಲೈನ್‌ ಮೂಲಕ ಹರಿಸಲಾಗುತ್ತದೆ. ಈ ಲೈನ್‌ ನಿಮ್ಮ ಮನೆಯ ಮೇಲೆಯೇ ಹಾದು ಹೋದರೂ ನಿಮಗೆ ವಿದ್ಯುತ್‌ ಸಿಗುವುದಿಲ್ಲ. ಅದಕ್ಕೆ ಟ್ರಾನ್ಸ್‌ಫಾರ್ಮರ್‌ ಬೇಕು. ಮೋದಿ ಸರ್ಕಾರ ವಿದ್ಯುತ್‌ ಉತ್ಪಾದನಾ ಕೇಂದ್ರವಿದ್ದಂತೆ. ಸಿದ್ದರಾಮಯ್ಯ ಸರ್ಕಾರ ಟ್ರಾನ್ಸ್‌ಫಾರ್ಮರ್‌. ಆದರೆ ಬೆಂಗಳೂರಿನ ಈ ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋಗಿದೆ. ಅದನ್ನು ಬದಲಿಸುವುದಲ್ಲ, ಕಿತ್ತುಹಾಕಿ ಬಿಜೆಪಿ-ಯಡಿಯೂರಪ್ಪ ಟ್ರಾನ್ಸ್‌ಫಾರ್ಮರ್‌ ತನ್ನಿ ಎಂದರು.

ಮೋದಿ ಸರ್ಕಾರ ಕರ್ನಾಟಕಕ್ಕೆ ಏನು ಮಾಡಿದೆ ಎಂದು ಸಿದ್ದರಾಮಯ್ಯ ಪದೇಪದೇ ಕೇಳುತ್ತಾರೆ. ನಾನು ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕರ್ನಾಟಕದ ಜನತೆಗೆ ಸರ್ಕಾರ ಲೆಕ್ಕ ಕೊಡುತ್ತೇವೆ ಎಂದ ಅವರು ‘ಖಾನ್‌ ಕೋಲ್ಕರ್‌ ಸುನ್ಲೋ ಸಿದ್ದರಾಮಯ್ಯ’ ಎನ್ನುತ್ತಾ ನೆರವು ನೀಡಿದ ಪಟ್ಟಿಯನ್ನು ಹೇಳಿದರು.

13ನೇ ಹಣಕಾಸು ಆಯೋಗದ ಮೂಲಕ ಮನಮೋಹನ್‌ ಸಿಂಗ್‌ ಸರ್ಕಾರ ರಾಜ್ಯಕ್ಕೆ ಕೊಟ್ಟಿದ್ದು .88,583 ಕೋಟಿ ಮಾತ್ರ. ಆದರೆ ಬಿಜೆಪಿ ಸರ್ಕಾರ ಕೊಟ್ಟಿದ್ದು .2,19,506 ಕೋಟಿ. ಇದನ್ನು ಕೊಟ್ಟು ರಾಜ್ಯದ ಜನತೆಗೆ ಉಪಕಾರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಇದು ಅವರ ಹಕ್ಕು. ಆದರೆ, ಕಾಂಗ್ರೆಸ್‌ ಸರ್ಕಾರ ನಿಮ್ಮ ಹಕ್ಕಿನ .88 ಸಾವಿರ ಕೋಟಿಯಿಂದ ವಂಚಿಸಿದರು. ನಿಮ್ಮ ಹಕ್ಕು ಪೂರ್ಣ ಕೊಟ್ಟಿದ್ದು ಮೋದಿ ಸರ್ಕಾರ ಎಂದು ನುಡಿದರು.

ರೈತರಿಗೆ ವಾಚ್‌ನ ಹಣ ಕೊಡುತ್ತಿದ್ದರೆ ಅವರ ಜೀವನ ಬಂಗಾರವಾಗ್ತಿತ್ತು!

ಐದು ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಇಡೀ ರಾಜ್ಯ ಸ್ತಬ್ಧವಾಗಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ನಂ.1 ಭ್ರಷ್ಟಾಚಾರಿ ಸರ್ಕಾರ ಎನ್ನುವುದಕ್ಕೆ ನನ್ನ ಬಳಿ ನೂರಾರು ಸಾಕ್ಷಿಗಳಿವೆ. ಎಲ್ಲವನ್ನೂ ಹೇಳಲು ಹೋಗುವುದಿಲ್ಲ. ಒಂದೇ ಉದಾಹರಣೆ ಕೊಡುತ್ತೇನೆ ಎನ್ನುತ್ತಾ ವಾಚ್‌ ಹಗರಣವನ್ನು ಪ್ರಸ್ತಾಪಿಸಿದರು. ನಿಮ್ಮಲ್ಲಿ ಯಾರ ಬಳಿಯಾದರೂ .40 ಲಕ್ಷ ಮೌಲ್ಯದ ವಾಚ್‌ ಇದೆಯೇ...? ಇಲ್ಲವಲ್ಲ. ಆದರೆ ಇಷ್ಟುಬೆಲೆಯ ವಾಚ್‌ ಅನ್ನು ಸಮಾಜವಾದಿ ನಾಯಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹೊಂದಿದ್ದಾರೆ ಎಂದು ಅಮಿತ್‌ ಶಾ ವ್ಯಂಗ್ಯವಾಡಿದರು.

ವಾಚ್‌ನ ಹಣವನ್ನು ಕಷ್ಟದಲ್ಲಿರುವ ರೈತರಿಗೆ ನೀಡಿದ್ದರೆ ರೈತರ ಜೀವನ ಬಂಗಾರವಾಗುತ್ತಿತ್ತು. ಮೋಜಿನ ಜೀವನ ಅನುಭವಿಸುತ್ತಿರುವ ಮುಖ್ಯಮಂತ್ರಿಗೆ ರೈತರ ಕಷ್ಟಅರ್ಥವಾಗುತ್ತಿಲ್ಲ ಎಂದರು.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸೋಮವಾರ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಶತಾಯುಷಿ ಶಿವಕುಮಾರ ಸ್ವಾಮೀಜಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‌ ಕುಮಾರ್‌ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ನನಗೆ ದೈವ ಸಾಕ್ಷಾತ್ಕಾರ ಆಗಿದೆ : ಈಗ ಚುನಾವಣೆ ಸಮಯ. ಸಿದ್ಧಗಂಗಾ ಶ್ರೀಗಳ ಭೇಟಿಯಿಂದ ನಮಗೆ ಹೊಸ ಬಲ ಬಂದಿದೆ. ಇದೇ ಮೊದಲ ಬಾರಿಗೆ ಶ್ರೀಗಳನ್ನು ಭೇಟಿಯಾಗುವ ಸೌಭಾಗ್ಯ ದೊರೆತಿದೆ. ಅವರ ಪಾದಕ್ಕೆ ನಮಸ್ಕರಿಸಿದ್ದರಿಂದ ದೈವ ಸಾಕ್ಷಾತ್ಕಾರ ಆದಂತಾಗಿದೆ.

- ಅಮಿತ್‌ ಶಾ

click me!