‘ಸಾಥ್ ಚಲೆಂಗೆ ಭಾಯೀ..’: ಠಾಕ್ರೆ ಮನೆಗೆ ಶಾ..!

First Published Jun 6, 2018, 8:57 PM IST
Highlights

ಮೈತ್ರಿಕೂಟದಲ್ಲಿನ ಬಿರುಕು ಮುಚ್ಚಲು ಅಮಿತ್ ಶಾ ರಣತಂತ್ರ

2019 ರ ಲೋಕಸಭೆ ಚುನಾವಣೆ ಒಟ್ಟಿಗೆ ಎದುರಿಸುವ ಅನಿವಾರ್ಯತೆ

ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಮನೆಗೆ ದೌಡಾಯಿಸಿದ ಶಾ

ಉದ್ದವ್ ಠಾಖ್ರೆ ಮನೆಯಲ್ಲಿ ಮಾತುಕತೆಯಲ್ಲಿ ಶಾ ತಲ್ಲೀನ

ಕೋಪ ಮರೆತು ಹಿರಿಯ ಸಹೋದರನನ್ನು ಅಪ್ಪಿಕೊಳ್ಳುವುದೇ ಶಿವಸೇನೆ?

ಮುಂಬೈ(ಜೂ.6): 2019 ರ ಲೋಕಸಭೆ ಚುನಾವಣೆಗೂ ಮುನ್ನ ಮಿತ್ರಪಕ್ಷಗಳನ್ನು ಹಿಡಿದಿಟ್ಟುಕೊಳ್ಳಬೇಕಾದ ಅನಿವಾರ್ಯತೆಗೆ ಬಿಜೆಪಿ ಬಂದಿದೆ. 2014 ರಲ್ಲಿ ಎನ್ ಡಿಎ ಮೈತ್ರಿಕೂಟದ ಅಡಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಕೆಲ ರಾಜಕೀಯ ಪಕ್ಷಗಳು ಎನ್ ಡಿಎ ತೊರೆದಿದ್ದರೆ, ಮತ್ತೆ ಕೆಲವು ಮೈತ್ರಿಕೂಟದಿಂದ ಹೊರ ಬರುವ ಮುನ್ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ ಮೈತ್ರಿಕೂಟವನ್ನು ಉಳಿಸಿಕೊಂಡು ಚುನಾವಣೆ ಎದುರಿಸುವ ಅನಿವಾರ್ಯತೆಗೆ ಬಿಜೆಪಿ ಸಿಲುಕಿದೆ.

ಇದೇ ಕಾರಣಕ್ಕೆ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ , ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಉದ್ದವ್ ಠಾಕ್ರೆ ಮನೆಗೆ ಭೇಟಿ ನೀಡಿದ ಶಾ, ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿದರು. ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷವಾಗಿರುವ ಶಿವಸೇನೆ, ಇದೀಗ ಬಂಡೆದಿದ್ದೆ. 2019 ರಲ್ಲಿ ಬಿಜೆಪಿ ಜೊತೆ ಯಾವುದೇ ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಮೈತ್ರಿ ಸಾಧ್ಯವಿಲ್ಲ ಎಂದು ಶಿವಸೇನೆ ಈಗಾಗಲೇ ಕಡ್ಡಿ ತುಂಡು ಮಾಡಿದಂತೆ ಹೇಳಿದೆ.

ಪ್ರಮುಖವಾಗಿ ಪ್ರಧಾನಿ ಮೋದಿ ಕಾರ್ಯವೈಖರಿ ಮತ್ತು ಮಿತ್ರಪಕ್ಷಗಳ ಕುರಿತು ಬಿಜೆಪಿಯ ಉದಾಸೀನತೆಗೆ ಶಿವಸೇನೆ ಸೆಡ್ಡು ಹೊಡೆದಿದೆ. ಮೈತ್ರಿಕೂಟದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುವುದನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಶಿವಸೇನೆ ಬಹಳ ಹಿಂದೆಯೇ ರವಾನಿಸಿದೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ 2019 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಅಮಿತ್ ಶಾ ಅವರು ಉದ್ದವ್ ಠಾಕ್ರೆ ಜೊತೆ ಸಂಧಾನ ಮಾತುಕತೆಗೆ ಮುಂದಾಗಿದ್ದಾರೆ.

ಈ ಸಂಧಾನ ಮಾತುಕತೆಯಲ್ಲಿ ಏನೆಲ್ಲಾ ಚರ್ಚೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿ ಗೊತ್ತಿಲ್ಲವಾದರೂ, 2019 ರಲ್ಲಿ ಒಟ್ಟಿಗೆ ಚುನಾವಣೆ ಎದುರಿಸುವ ಅನಿವಾರ್ಯತೆಯನ್ನು ಶಾ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಉದ್ದವ್ ಠಾಕ್ರೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆಯೇ ಎಂಬುದೇ ಸದ್ಯದ ಕುತೂಹಲ. ಇನ್ನು ಉದ್ದವ್ ಠಾಕ್ರೆ ಜೊತೆಗಿನ ಮಾತುಕತೆ ಬಳಿಕ ಅಮಿತ್ ಶಾ ಚಂಢಿಗಡ್ ಗೆ ಪ್ರಯಾಣ ಬೆಳೆಸಲಿದ್ದು, ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ ಜೊತೆಗೂ ಮಾತುಕತೆ ನಡೆಸಲಿದ್ದಾರೆ. 

click me!