
ಮೈಸೂರು : ಕರ್ನಾಟಕದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆ ಮಾಡಿರುವ ಹಂತಕರು ಪಾತಾಳದಲ್ಲಿ ಅಡಗಿದ್ದರೂ ಬಿಡುವುದಿಲ್ಲ. ಹಂತಕರನ್ನು ಬಂಧಿಸಿ ಜೈಲಿಗೆ ಹಾಕುತ್ತೇವೆ. ಅವರನ್ನು ಕಠೋರ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೊಮ್ಮೆ ಗುಡುಗಿದ್ದಾರೆ.
2016ರಲ್ಲಿ ಹತ್ಯೆಗೀಡಾಗಿದ್ದ ಮೈಸೂರಿನ ಆರೆಸ್ಸೆಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 25 ಮಂದಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರು ಹಿಂದೂ ಕಾರ್ಯಕರ್ತರ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಈ ಮೂಲಕ ಮತ್ತಷ್ಟುಹತ್ಯೆಗೆ ಸರ್ಕಾರ ಅವಕಾಶ ನೀಡಿದೆ. ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರ ಹಿಂಸೆ ಮೂಲಕ ನಮ್ಮ ವಿಚಾರಧಾರೆಗಳನ್ನು ಹತ್ತಿಕ್ಕಬಹುದು ಎಂದು ಅಂದುಕೊಂಡಿದೆ. ಆದರೆ, ಅದು ಸಾಧ್ಯದ ಮಾತು ಎಂದು ಶಾ ಹೇಳಿದರು.
ಈಗ ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದಿದೆ. ರಾಜ್ಯದಲ್ಲಿ ಮುಂದೆ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದವರು ಪಾತಾಳದಲ್ಲಿ ಅಡಗಿದ್ದರೂ ಹಿಡಿದು ಜೈಲಿಗೆ ಹಾಕಿ, ಕಠೋರ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಗುಡುಗಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.