‘ನಟಿ ಆದರೇನು? ಮುಲಾಜಿಲ್ಲದೇ ಕೇಸ್ ಹಾಕಿ; ಹೆಬ್ಬುಲಿ ನಟಿಗೆ ಕಿರಣ್ ಬೇಡಿ ಶಾಕ್!

By Suvarna Web DeskFirst Published Nov 1, 2017, 5:07 PM IST
Highlights

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್‌ ಮೇಲೆ ತಕ್ಷ ಣವೇ ವಂಚನೆ ಕೇಸ್‌ ದಾಖಲಿಸಿ, ತನಿಖೆ ಕೈಗೊಳ್ಳಬೇಕೆಂದು ಪುದುಚೆರಿ ಲೆಫ್ಟಿನೆಂಟ್​ ಗವರ್ನರ್‌ ಕಿರಣ್‌ ಬೇಡಿ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ನವದೆಹಲಿ (ನ.01): ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್‌ ಮೇಲೆ ತಕ್ಷ ಣವೇ ವಂಚನೆ ಕೇಸ್‌ ದಾಖಲಿಸಿ, ತನಿಖೆ ಕೈಗೊಳ್ಳಬೇಕೆಂದು ಪುದುಚೆರಿ ಲೆಫ್ಟಿನೆಂಟ್​ ಗವರ್ನರ್‌ ಕಿರಣ್‌ ಬೇಡಿ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಐಷಾರಾಮಿ ಕಾರ್‌ನ ತೆರಿಗೆ ಉಳಿಸುವ ಸಲುವಾಗಿ ಸುಳ್ಳು ವಿಳಾಸ ನೀಡಿ ಪುದುಚೆರಿಯಲ್ಲಿ ಕಾರ್‌ ನೋಂದಣಿ ಮಾಡಿಸಿ ಮತ್ತು ತೆರಿಗೆ ವಂಚನೆ ಮಾಡಿದ ಆರೋಪ ಅಮಲಾ ಮೇಲಿದೆ. ನಾವು ಇಂಥ ಮೋಸಗಳಿಗೆ ಕೊನೆ ಹಾಡಬೇಕಿದೆ. ಪುದುಚೆರಿಗೆ ತೆರಿಗೆ ನಷ್ಟವಾದರೂ, ತಮಿಳುನಾಡಿಗೆ ತೆರಿಗೆ ನಷ್ಟವಾದರೂ, ಅದು ದೇಶದ ಕಂದಾಯಕ್ಕಾಗುವ ನಷ್ಟವೇ. ಜತೆಗೆ, ಇಂಥ ತಂತ್ರಗಳು ನಮ್ಮ ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತವೆ. ಈ ಪ್ರಕರಣದ ಕುರಿತು ತಕ್ಷ ಣವೇ ಗಮನ ಹರಿಸಿ, ಯಾರೇ ಆದ್ರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದು ಕಿರಣ್​ ಬೇಡಿ ಸೂಚನೆ ನೀಡಿದ್ದಾರೆ. 1.12 ಕೋಟಿ ರೂ. ಮೊತ್ತದ ಎಸ್‌ ಕ್ಲಾಸ್‌ ಮರ್ಸಿಡಸ್‌ ಬೆಂಜ್‌ ಕಾರನ್ನು ಅಮಲಾ ಪೌಲ್​ ಖರೀದಿಸಿದ್ದರು. ಕೇರಳದಲ್ಲಿ ಇದಕ್ಕೆ 20 ಲಕ್ಷ ರೂ. ಇದ್ದರೆ, ಪುದುಚೆರಿಯಲ್ಲಿ ಕೇವಲ 1.12 ಲಕ್ಷ ರೂ. ಮಾತ್ರ. ಅಂದರೆ ಸುಮಾರು 20 ಪಟ್ಟು ಕಡಿಮೆ ತೆರಿಗೆ ಇದೆ. ಹೀಗಾಗಿ ಅಮಲಾ, ಕಾರ್‌ ನೋಂದಣಿಗೆ ಪುದುಚೆರಿಯ ಸಂಬಂಧಿಯೊಬ್ಬರ ವಿಳಾಸ ನೀಡಿದ್ದಾರೆ ಎನ್ನಲಾಗಿದೆ. ಅಮಲಾ ವಂಚನೆ ಕೇಸ್‌ ಹೊರಬರುತ್ತಿದ್ದಂತೆಯೇ ಮಲಯಾಳಂ ನಟ ಫಹಾದ್‌ ಫಾಸಿಲ್‌ರ ಇ ಕ್ಲಾಸ್‌ ಬೆಂಜ್‌ ಕೂಡಾ ಪುದುಚೆರಿಯಲ್ಲೇ ರಿಜಿಸ್ಟರ್‌ ಆಗಿರುವುದು ಬೆಳಕಿಗೆ ಬಂದಿದೆ. ನಟನಟಿಯರ ತೆರಿಗೆ ವಂಚನೆ ಬೆಳಕಿಗೆ ಬರುತ್ತಿದ್ದಂತೆಯೇ, ಪುದುಚೆರಿಯ ಕಾಯಂ ನಿವಾಸಿಗಳಿಗೆ ಮಾತ್ರ ಇಲ್ಲಿ ನೋಂದಣಿ ಮಾಡಿಸಲು ಅವಕಾಶ ನೀಡಬೇಕು ಹಾಗೂ ನೋಂದಣಿದಾರರು ನೀಡಿದ ವಿಳಾಸ ಪರಿಶೀಲಿಸಬೇಕು ಎಂದು ಕಿರಣ್‌ ಬೇಡಿ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

click me!