
ಬೆಂಗಳೂರು (ಜ.26): ಮಹದಾಯಿ ನದಿ ನೀರಿನ ವಿಷಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ಸಮರ ತೀವ್ರಗೊಂಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಳಗ್ಗೆ 11 ಗಂಟೆಗೆ ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮತ್ತೊಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಈ ವಿಚಾರವಾಗಿ ನಡೆಯುತ್ತಿರುವ ಮೂರನೇ ಸರ್ವಪಕ್ಷಗಳ ಸಭೆ ಇದಾಗಿದೆ. ಮಹದಾಯಿ ನದಿ ವಿವಾದವನ್ನು ಮಾತುಕತೆ ಮೂಲಕವೇ ಬಗೆಹರಿಸಲು ಗೋವಾ ಸರ್ಕಾರ ಮುಂದೆ ಬರಬೇಕೆಂದು ಒತ್ತಾಯಿಸಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎರಡು ಸಭೆಗಳು ನಡೆದಿದ್ದು, ವಿಧಾನಸಭೆಯಲ್ಲಿ ಎರಡೆರಡು ಬಾರಿ ನಿರ್ಣಯವನ್ನು ಕೂಡ ಅಂಗೀಕರಿಸಲಾಗಿದೆ. ವಿವಾದ ಇತ್ಯರ್ಥಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕೆಂದೂ ಸಹ ಶಾಸನಸಭೆ ನಿರ್ಣಯದ ಮೂಲಕ ಒತ್ತಾಯಿಸಿದೆ. ಆದರೆ ಈ ತನಕ ಯಾವುದೇ ಸಭೆ ಹಾಗೂ ನಿರ್ಣಯದಿಂದ ಯಾವುದೇ ಲಾಭವಾಗಿಲ್ಲ. ಇದೀಗ ರೈತ ಮುಖಂಡರ ಒತ್ತಾಯದ ಮೇರೆಗೆ ಮತ್ತೊಮ್ಮೆ ಸರ್ವಪಕ್ಷಗಳ ಸಭೆ ಕರೆಯಲಾಗಿದೆ.
ಈ ಬಾರಿಯ ಸಭೆಯಲ್ಲೂ ಕೂಡ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಬಹುದೇ ಹೊರತು ಬೇರೆ ಯಾವುದೇ ಮಾರ್ಗೋಪಾಯ ಸರ್ಕಾರದ ಮುಂದಿಲ್ಲ. ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರು, ರಾಜಕೀಯ ಪಕ್ಷಗಳ ಅಧ್ಯಕ್ಷರು, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಎಲ್ಲ ಕೇಂದ್ರ ಸಚಿವರು ಹಾಗೂ ರೈತ ಮುಖಂಡರು ಪಾಲ್ಗೊಳ್ಳುವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.