
ಬೆಂಗಳೂರು (ಜ.26): ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್ ಚುನಾವಣೆಯಲ್ಲಿ ಆ ರಾಜ್ಯದ ಮೂಲೆಮೂಲೆ ತಿರುಗಿ ಚುನಾವಣಾ ಪ್ರಚಾರ ನಡೆಸಲು ಬಳಸಿದ ವಿಶೇಷ ಬಸ್ ಬೆಂಗಳೂರಿಗೆ ಬಂದಿದೆ. ಈ ಬಸ್ಸನ್ನೇ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸಕ್ಕೂ ಬಳಸಲಿದ್ದಾರೆ.
ರಾಹುಲ್ ಅವರ ಅಭಿರುಚಿಗೆ ತಕ್ಕಂತೆ ರೂಪಿಸಲಾಗಿರುವ ಈ ಸಕಲ ಸೌಲಭ್ಯ ಸಜ್ಜಿತವಾದ ವೋಲ್ವೋ ಸಂಸ್ಥೆಯ ಬಸ್ ಇದೀಗ ನಗರದ ಗ್ಯಾರೇಜ್‌ವೊಂದರಲ್ಲಿ ಗುಜರಾತಿ ಭಾಷೆಯಲ್ಲಿದ್ದ ನಾಮ ಫಲಕ, ಘೋಷಣೆಗಳನ್ನು ಕಳಚಿಕೊಂಡು ಕನ್ನಡದಲ್ಲಿ ಪಕ್ಷದ ಹೆಸರು, ಯಾತ್ರೆಗೆ ಸಂಬಂಧಿಸಿದ ಘೋಷಣೆಗಳು ಹಾಗೂ ನಾಯಕರ ಹೆಸರನ್ನು ಬರೆಸಿಕೊಂಡು ನವರೂಪ ತಳೆದಿದ್ದು, ಪ್ರಸ್ತುತ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರ ಸುಪರ್ದಿಯಲ್ಲಿದೆ.
ರಾಹುಲ್ ಗಾಂಧಿ ಅವರು ಗುಜರಾತಿನಲ್ಲಿ ನವಸರ್ಜನ್ (ಹೊಸ ಹುಟ್ಟು) ಹೆಸರಿನಲ್ಲಿ ಆ ರಾಜ್ಯದ ಮೂಲೆ ಮೂಲೆಯನ್ನು ಸಂಚರಿಸಿ, ‘ಟೆಂಪಲ್ ರನ್’ ನಡೆಸಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದು ಈ ಬಸ್ ಮೂಲಕ ನಡೆಸಿದ ಯಾತ್ರೆಯಿಂದಲೇ. ಇದೇ ಬಸ್ ಅನ್ನು ರಾಜ್ಯದಲ್ಲೂ ಬಳಸಲು ರಾಹುಲ್ ನಿರ್ಧರಿಸಿದ್ದಾರೆ. ಇದರ ಪರಿಣಾಮ ಅವರ ಯಾತ್ರೆಗಾಗಿ ಚೆನ್ನೈನಲ್ಲಿ ವಿಶೇಷ ಬಸ್ ಸಜ್ಜುಗೊಳಿಸುವ ರಾಜ್ಯ ನಾಯಕರ ಪ್ರಯತ್ನ ನಿಲ್ಲಿಸಬೇಕಾಗಿ ಬಂದಿದೆ.
ಏನಿದೆ ಈ ಬಸ್’ನಲ್ಲಿ : ರಾಹುಲ್ ಬಸ್‌ನಲ್ಲಿ ಒಂದು ಯಾತ್ರೆಗೆ ಬಳಸಲು ಬೇಕಾದ ಎಲ್ಲಾ ಸವಲತ್ತುಗಳು ಇವೆ. ಯಾತ್ರೆಯ ಅಂಗವಾಗಿ ಯಾವ ಜಿಲ್ಲೆಗೆ ರಾಹುಲ್ ಹೋಗುವರೋ ಆ ಜಿಲ್ಲೆಯ ನಾಲ್ಕೈದು ಮಂದಿ ಪ್ರಮುಖರನ್ನು ಬಸ್‌ಗೆ ಹತ್ತಿಸಿಕೊಂಡು ಅವರೊಂದಿಗೆ ಸಭೆ ನಡೆಸಲು ಅಗತ್ಯವಾದ ಸುಸಜ್ಜಿತ ಮೀಟಿಂಗ್ ಹಾಲ್ ಇದೆ. ಬಸ್ಸಿನ ಒಳಗಿನಿಂದಲೇ ಜನರೊಂದಿಗೆ ಮಾತನಾಡಲು ಅಗತ್ಯವಾದ ವ್ಯವಸ್ಥೆಯಿದೆ. ಬಸ್‌ನಲ್ಲೇ ಅಡುಗೆ ಮಾಡಿಕೊಳ್ಳಬಹುದಾದ ಸೌಲಭ್ಯ, ಶೌಚಾಲಯ ಹಾಗೂ ಆರಾಮದಾಯಕ ಆಸನಗಳು ಇದ್ದು, ಈ ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.