
ಬೆಂಗಳೂರು (ಜ.26): ತನ್ನನ್ನು ‘ಹಾಫ್ ಮೆಂಟಲ್’ ಎಂದು ರೇಗಿಸಿದಕ್ಕೆ ಕೋಪಗೊಂಡು ಗೆಳೆಯನನ್ನು ಕೊಂದಿದ್ದ ಅಡುಗೆ ಕೆಲಸಗಾರನೊಬ್ಬನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಗಾನಗರದ ನಿವಾಸಿ ಅನಿಲ್ (30) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಮೃತನ ಸ್ನೇಹಿತ ಆರ್. ರವಿಯನ್ನು ಬಂಧಿಸಲಾಗಿದೆ. ಮೂರು ದಿನಗಳ ಹಿಂದೆ ಮನೆಯಲ್ಲಿ ಗೆಳೆಯನ ಕೊಲೆ ಮಾಡಿದ ನಂತರ ಆರೋಪಿ, ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ಹೆಬ್ಬಾಳ ಕೆರೆಗೆ ಎಸೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಮನಗರ ಜಿಲ್ಲೆ ತೂಬಿನಗೆರೆ ಗ್ರಾಮದ ರವಿ, ಗಂಗಾನಗರದ ಸಿಬಿಐ ಕಚೇರಿ ಬಳಿ ಮೊಬೈಲ್ ಕ್ಯಾಂಟೀನ್ ನಡೆಸುವ ಹರೀಶ್ ಎಂಬುವರ ಬಳಿ ಕೆಲಸ ಮಾಡುತ್ತಿದ್ದನು. ಇತ್ತೀಚಿಗೆ ಅನಿಲ್ ಸಹ, ಅದೇ ಕ್ಯಾಂಟೀನ್‌ನಲ್ಲಿ ಕೆಲಸಕ್ಕೆ ಸೇರಿದ್ದನು. ಗಂಗಾನಗರದ ಐದನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ಅವರಿಬ್ಬರು ನೆಲೆಸಿದ್ದರು. ತನ್ನನ್ನು ತಮಾಷೆಗೆ ‘ಹಾಫ್ ಮೆಂಟಲ್’ ಎಂದು ಕರೆಯುತ್ತಿದ್ದರಿಂದ ಅನಿಲ್ ಮೇಲೆ ಆರೋಪಿಗೆ ಕೋಪ ಬಂದಿತ್ತು.
ಈ ರೀತಿ ಕರೆಯದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಅನಿಲ್, ಅರೆ ಹುಚ್ಚ ಎಂದೇ ಗೇಲಿ ಮಾಡುತ್ತಿದ್ದ. ಇದೇ ವಿಷಯಕ್ಕೆ ಜ.21ರ ಬೆಳಗಿನ ಜಾವ ಸಹ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಆಗ ಕೋಪಗೊಂಡ ರವಿ, ಅನಿಲ್‌ನ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ನಂತರ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡ ಆತ, ಅದನ್ನು ಬಾಡಿಗೆ ಆಟೋದಲ್ಲಿ ಹೆಬ್ಬಾಳದ ಕೆರೆ ಹತ್ತಿರ ತೆಗೆದುಕೊಂಡು ಹೋಗಿದ್ದ. ಅಲ್ಲಿಂದ ಆಟೋ ಚಾಲಕನನ್ನು ಕಳುಹಿಸಿ, ನಂತರ ಮೃತದೇಹವನ್ನು ಕೆರೆಯ ಕೋಡಿಗೆ ಎಸೆದು ಮತ್ತೊಂದು ಆಟೋದಲ್ಲಿ ಅವನು ಮನೆಗೆ ಮರಳಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಚೋಳನಾಯಕನಹಳ್ಳಿಯ ಮೀನು ವ್ಯಾಪಾರಿ ಗೋವಿಂದರಾಜ್ ಅವರು, ಮಧ್ಯಾಹ್ನ 12.30 ಸುಮಾರಿಗೆ ಮೀನು ಹಿಡಿಯಲು ಕೆರೆ ಹತ್ತಿರ ಬಂದಿದ್ದರು. ಮೂಟೆ ಹರಿದು ಮೃತರ ಕಾಲುಗಳು ಹೊರ ಬಂದಿದ್ದರಿಂದ ಗಾಬರಿಗೊಂಡ ಅವರು, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಈ ಮಾಹಿತಿ ತಿಳಿದು ತಕ್ಷಣವೇ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು.
ಹೀಗಿರುವಾಗ ಮೃತದೇಹ ಅಲ್ಲೇ ಇದೆಯೇ ಎಂಬುದನ್ನು ನೋಡಲು ಮಧ್ಯಾಹ್ನ 2ಗಂಟೆ ಸುಮಾರಿಗೆ ಪುನಃ ಕೆರೆ ಸಮೀಪ ರವಿ ಬಂದಿದ್ದ. ಈ ವೇಳೆ ಸ್ಥಳ ಮಹಜರು ಮಾಡುತ್ತಿದ್ದ ಪೊಲೀಸರು, ಆತನ ವರ್ತನೆಯಿಂದ ಶಂಕೆಗೊಂಡಿದ್ದಾರೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.