‘ಅಕ್ಷಯ ಪಾತ್ರ’ಗೆ ಬಿಬಿಸಿ ಪ್ರಶಸ್ತಿ ಪ್ರಕಟ

By Web DeskFirst Published Jun 15, 2019, 8:26 AM IST
Highlights

ಹಸಿದ ಮಕ್ಕಳ ಹೊಟ್ಟೆಗೆ ತುತ್ತನ್ನು ನೀಡುವ ‘ಅಕ್ಷಯ ಪಾತ್ರ’ ಬಿಸಿಯೂಟ ಯೋಜನೆ ಪ್ರಸಕ್ತ ಸಾಲಿನ ಬಿಬಿಸಿ ವಿಶ್ವ ಸೇವಾ ಜಾಗತಿಕ ಚಾಂಪಿಯನ್‌ ಪ್ರಶಸ್ತಿಗೆ ಭಾಜನವಾಗಿದೆ. 

ಲಂಡನ್‌(ಜೂ.15) : ಬೆಂಗಳೂರು ಮೂಲದ ಎನ್‌ಜಿಒ ‘ಅಕ್ಷಯ ಪಾತ್ರ’ ಬಿಸಿಯೂಟ ಯೋಜನೆ ಪ್ರಸಕ್ತ ಸಾಲಿನ ಬಿಬಿಸಿ ವಿಶ್ವ ಸೇವಾ ಜಾಗತಿಕ ಚಾಂಪಿಯನ್‌ ಪ್ರಶಸ್ತಿಗೆ ಭಾಜನವಾಗಿದೆ. ಇದೇ ವಾರ ಬ್ರಿಸ್ಟಲ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಬಿಬಿಸಿ ಆಹಾರ ಮತ್ತು ತಯಾರಿಕೆ ವಿಭಾಗ ನೀಡುವ ಈ ಪ್ರಶಸ್ತಿಯನ್ನು ವಿಶ್ವದ ಎಲ್ಲೆಡೆಯಿಂದ ಬರುವ ಅರ್ಜಿಗಳನ್ನು ಪರಿಶೀಲಿಸಿ ಅಂತಿಮವಾಗಿ ಅಂತಾರಾಷ್ಟ್ರೀಯ ಮಟ್ಟದ ನಿರ್ಣಾಯಕರ ನಿಯೋಗ ಆಯ್ಕೆ ಮಾಡಲಿದೆ. ‘ಅಕ್ಷಯ ಪಾತ್ರ’ ಬೃಹತ್‌ ಪ್ರಮಾಣದಲ್ಲಿ ಗುಣಮಟ್ಟದ ಬಿಸಿಯೂಟ ಸಿದ್ಧಪಡಿಸಿ ಶಾಲೆಗಳಿಗೆ ಪೂರೈಕೆ ಮಾಡುವುದರೊಂದಿಗೆ ಉತ್ತಮ ಸಮಾಜ ಸೇವೆ ಸಲ್ಲಿಸುತ್ತಿದೆ. ಅವರ ಸೇವೆ ಶ್ಲಾಘನಾರ್ಹ, ಅಷ್ಟೇ ಅಲ್ಲ ಹೆಮ್ಮೆ ಎನಿಸುತ್ತದೆ ಎಂದು ನಿರ್ಣಾಯಕರ ಆಯೋಗದ ಮುಖ್ಯಸ್ಥೆ, ಇರಾನ್‌-ಅಮೆರಿಕನ್‌ ಲೇಖಕಿ ಸಾಮಿನ್‌ ನೊಸ್ರತ್‌ ಹೇಳಿದ್ದಾರೆ.

ಅನೇಕ ಮಕ್ಕಳು ಹಸಿದ ಹೊಟ್ಟೆಯಲ್ಲಿದ್ದು ಹೊಟ್ಟೆನೋವಿನಿಂದ ಬಳಲಿರುವ ಘಟನೆಗಳು ನಡೆದಿರುವುದನ್ನು ನೋಡಿ, ಇಂಥ ಮಕ್ಕಳಿಗೆ ಊಟ ಒದಗಿಸುವ ಉದ್ದೇಶದೊಂದಿಗೆ ಪ್ರಾರಂಭವಾದ ‘ಅಕ್ಷಯ ಪಾತ್ರ’ ಇಂದು ಸಹಸ್ರಾರು ಮಕ್ಕಳಿಗೆ ಆಹಾರ ಪೂರೈಸುತ್ತಿದೆ.

ಬಿಬಿಸಿ ಜಾಗತಿಕ ಸೇವಾ ಸಂಸ್ಥೆ ಪ್ರತಿಷ್ಠಿತ ಪ್ರಶಸ್ತಿಗೆ ನಮ್ಮ ಸಂಸ್ಥೆಯ ಸೇವೆಯನ್ನು ನೋಡಿ ಪರಿಗಣಿಸಿರುವುದು ಬಹಳ ಖುಷಿ ತಂದಿದೆ. ಅಕ್ಷಯ ಪಾತ್ರ ದೇಶಾದ್ಯಂತ ಪ್ರತಿದಿನ 17.5 ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಕೆ ಮಾಡುತ್ತಿದೆ. ಇಂಥದ್ದೊಂದು ಸಂಸ್ಥೆಯನ್ನು ಪ್ರಾರಂಭಿಸುವ ಆಶಯ 20 ವರ್ಷಗಳ ಹಿಂದೆಯೇ ಬಂದಿತ್ತು. ಅದೀಗ ಕೈಗೂಡಿದ್ದು, ಮುನ್ನಡೆಯುತ್ತಿದೆ.

- ಶ್ರೀಧರ್‌ ವೆಂಕಟ್‌, ಅಕ್ಷಯ ಪಾತ್ರ ಸಿಇಒ

ಅಕ್ಷಯ ಪಾತ್ರ ಪ್ರಶಸ್ತಿಗೆ ಅರ್ಹ ಸಂಸ್ಥೆ. ಇಂಥ ಸಂಸ್ಥೆ ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವುದು ನಮಗೂ ಹೆಮ್ಮೆಯ ಸಂಗತಿ. ಸಾರ್ವಜನಿಕರು ಇಂಥ ಸಂಸ್ಥೆಯ ಬಗ್ಗೆ ವಿಶೇಷ ಕಾಳಜಿಯಿಂದ ಪ್ರೋತ್ಸಾಹಿಸಿರುವುದು ಗಮನಾರ್ಹ.

- ಸ್ಟೀಫನ್‌ ತಿಥೆರಿಂಗ್ಟಾನ್‌, ಬಿಬಿಸಿ ವಲ್ಡ್‌ರ್‍ ಸವೀರ್ಸ್ ಹಿರಿಯ ಕಮಿಷನಿಂಗ್‌ ಎಡಿಟರ್‌

click me!