ಮದುವೆಯಾಗುವುದಾಗಿ ವಿಚ್ಛೇದಿತ ಮಹಿಳೆಗೆ ವಂಚನೆ: ಕೇಸ್‌ ದಾಖಲು

By Web DeskFirst Published Jun 14, 2019, 10:33 AM IST
Highlights

ವಿಚ್ಛೇದಿತ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಕೊನೆಗೆ ವಿವಾಹವಾಗದೆ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸುವ ನಾಟಕವಾಡಿ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಕೊನೆಗೆ ವಿವಾಹವಾಗದೆ ವಂಚಿಸಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಇಂದಿರಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿರಾನಗರದ 28 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಸಾಕಿಬ್‌ ಅಹಮ್ಮದ್‌ ಖುರೇಶಿ ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೂರುದಾರ ಮಹಿಳೆ ಕೌಟುಂಬಿಕ ಕಲಹದಿಂದ ಮೊದಲನೇ ಪತಿಯಿಂದ ವಿಚ್ಛೇದನ ಪಡೆದು ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಜೀವನೋಪಾಯಕ್ಕಾಗಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಖುರೇಶಿ ಪರಿಚಯವಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಖುರೇಶಿ ಪ್ರೀತಿಸುವ ನಾಟಕವಾಡಿ ವಿವಾಹವಾಗುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆರೋಪಿಸಲಾಗಿದೆ.

ಕಳೆದ ವರ್ಷ ಮಹಿಳೆಯು ರಿಜಿಸ್ಟ್ರರ್‌ ಮ್ಯಾರೇಜ್‌ ಮಾಡಿಕೊಳ್ಳಲು ಸಿದ್ಧತೆ ಮಾಡುವಾಗ ಆರೋಪಿ ನಾನಾ ಕಾರಣ ನೀಡಿ ಮದುವೆ ಮುಂದೂಡಿದ್ದ. ವಿವಾಹವಾಗಲು ಕೊಂಚ ಸಮಯಬೇಕು ಎಂದು ಕೇಳಿದ್ದ. ನಂತರವೂ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಖುರೇಶಿ ಮದುವೆಗೆ ಒಪ್ಪಿರುವ ವಿಚಾರವನ್ನು ಮಹಿಳೆ ತನ್ನ ಪೋಷಕರಿಗೆ ಹೇಳಿ ಅವರ ಒಪ್ಪಿಗೆ ಸಹ ಪಡೆದಿದ್ದರು. ಅದರಂತೆ ಮಹಿಳೆ ಮನೆಯವರು ಫೆ.24ರಂದು ವಿವಾಹಕ್ಕೆ ದಿನಾಂಕ ನಿಗದಿ ಮಾಡಿದ್ದರು. ಇದೀಗ ಮಹಿಳೆಯನ್ನು ಭೇಟಿಯಾಗಿರುವ ಖುರೇಶಿ, ತಾನು ವಿವಾಹವಾಗುವುದಿಲ್ಲ ಎಂದು ಮಹಿಳೆಗೆ ಹೇಳಿದ್ದಾನೆ. ಅಷ್ಟೇ ಅಲ್ಲದೆ, ಮಹಿಳೆಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಠಾಣೆ ಪೊಲೀಸರು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

click me!