ವಾರದಿಂದ ಪೋಷಕರ ಕಾಣದೆ ಪರಿತಪಿಸುತ್ತಿದ್ದಾಳೆ ಐರಾ

By Suvarna NewsFirst Published Dec 26, 2019, 5:08 PM IST
Highlights

ಪೌರತ್ವ ಮಸೂದೆ ವಿರುದ್ಧದ ಪ್ರತಿಭಟನೆ| ತಂದೆ-ತಾಯಿ ಕಾಣದೇ ಒಂದು ವಾರ ಕಳೆದ ಮಗು| ಮಗು ಐರಾ ಪರಿಸ್ಥಿತಿ ಯಾರ ಕಣ್ಣಿಗೂ ಕಾಣುತ್ತಿಲ್ಲ.

ವಾರಣಾಸಿ(ಡಿ. 26)  ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಉತ್ತರ ಪ್ರದೇಶದ ಈ ಪ್ರಕರಣ ಮಾತ್ರ ಪ್ರತಿಭಟನೆಯ ಇನ್ನೊಂದು ಮುಖವನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ಉತ್ತರ ಪ್ರದೇಶ ವಾರಣಾಸಿಯ 14 ತಿಂಗಳ ಈ ಪುಟ್ಟ ಮಗುವಿನ ಕತೆ ಹೊಸದೊಂದು ಮುಖವನ್ನು ಅನಾವರಣ ಮಾಡಿದೆ.  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಗುವಿನ ಪಾಲಕರು ಒಂದು ವಾರದಿಂದ ಜೈಲಿನಲ್ಲಿ ಇದ್ದಾರೆ. ಬಂಧನ ಮಾಡಿರುವುದೇ ವಿವಾದಲ್ಲಿರುವಾಗ ಈ ಮಗುವಿನ ಕತೆಯನ್ನು ಮಾತ್ರ ಯಾರೂ ಕೇಳದಂತಾಗಿದೆ.

ವಾರಣಾಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ 60 ಜನ ಬಂಧನಕ್ಕೆ ಒಳಗಾಗಿದ್ದರು. ಏಕ್ತಾ, ರವಿ ಶೇಖರ್ ಸೇರಿದಂತೆ ಅನೇಕರ ಬಂಧನ ಮಾಡಲಾಗಿತ್ತು.  ವಾಯು ಮಾಲಿನ್ಯ ತಡೆಗಾಗಿ ಹೋರಾಟ ಮಾಡುವ ಎನ್‌ಜಿಒ ಒಂದನ್ನು ನಡೆಸುತ್ತಿದ್ದರು.

ಡಿಸೆಂಬರ್ 19 ರಂದು ನಡೆದ ಪ್ರತಿಭಟನೆ ವೇಳೆ ಇಬ್ಬರನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಅವರ 14 ತಿಂಗಳಿನ ಹೆಣ್ಣು ಮಗು ಐರಾ ಮನೆಯಲ್ಲೆ ಇರುತ್ತಾಳೆ. ತಂದೆ-ತಾಯಿ ಜೈಲು ಸೇರಿದರೆ ಮಗುವನ್ನು ಸಂಬಂಧಿಕರು ನೋಡಿಕೊಳ್ಳುತ್ತಿದ್ದಾರೆ.

ಪೊಲೀಸರ ಮೇಲೆ ಪ್ರತಿಭಟನಾಕಾರರ ಫೈರಿಂಗ್

ಜೈಲು ಸೇರಿರುವ ದಂಪತಿ ಏಕ್ತಾ ಮತ್ತು ರವಿ ಶೇಖರ್ ಅವರ ಜಾಮೀನಿಗಾಗಿ ಸಂಬಂಧಿಕರು ಹೋರಾಟ ಮಾಡುತ್ತಲೇ ಇದ್ದಾರೆ. ಇತ್ತ ಪುಟ್ಟ ಮಗು ತಂದೆ-ತಾಯಿ ಕಾಣದೆ ವಾರ ಕಳೆದಿದೆ.

ನನ್ನ ಮಗ ಯಾವ ಅಪರಾಧ ಮಾಡಿಲ್ಲ. ಆತ ಪ್ರತಿಭಟನೆಯಲ್ಲಿ ಶಾಂತರೀತಿಯಲ್ಲಿ ಪಾಲ್ಗೊಂಡಿದ್ದ. ತಾಯಿ ಕಾಣದೆ 14 ತಿಂಗಳ ಮಗು ಪಡುತ್ತಿರುವ ಸಂಕಷ್ಟಕ್ಕೆ ಹೊಣೆ ಯಾರು? ಎಂದು ರವಿ ಶೇಖರ್ ತಾಯಿ ಶೀಲಾ ತಿವಾರಿ ಪ್ರಶ್ನೆ ಮಾಡುತ್ತಾರೆ.

ಮಗು ಆಹಾರ ಸೇವನೆ ಮಾಡುತ್ತಿಲ್ಲ. ನಾವು ಪ್ರಯತ್ನ ಮಾಡಿದರೆ, ಅಪ್ಪಾ ,,ಅಮ್ಮಾ,, ಎಂದು ಹಠ ಮಾಡುತ್ತದೆ. ನಮಗೆ ಏನು ಮಾಡಬೇಕು ಎಂಬುದೇ ತೋಚದಾಗಿದೆ ಎಂದು ತಿವಾರಿ ಅಳಲು ತೋಡಿಕೊಳ್ಳುತ್ತಾರೆ. ಪೌರತ್ವ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ 20 ಜನ ಸಾವನ್ನಪ್ಪಿದ್ದಾರೆ.

click me!