
ನವದೆಹಲಿ : 1947ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಕದನದಲ್ಲಿ ಜಮ್ಮು ಕಾಶ್ಮೀರವನ್ನು ಭಾರತದೊಂದಿಗೆ ಉಳಿಯುವಂತೆ ಮಾಡಿದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಡಿಸಿ 3 ಡಕೋಟ ಯುದ್ಧ ವಿಮಾನವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಭಾರತೀಯ ವಾಯುಪಡೆಗೆ ಉಡುಗೊರೆಯಾಗಿ ನೀಡಿದ್ದಾರೆ.
ದೆಹಲಿಯ ಆಕಾಶ್ ಏರ್‌ಫೋರ್ಸ್ ಮೆಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏರ್ ಚೀಫ್ ಮಾರ್ಷಲ್ ಬಿರೇಂದ್ರ ಸಿಂಗ್ ಧನೋವಾ ಅವರೊಂದಿಗೆ ಉಡುಗೊರೆ ಒಪ್ಪಂದಕ್ಕೆ ರಾಜೀವ್ ಚಂದ್ರಶೇಖರ್ ಸಹಿ ಹಾಕಿದರು. ರಾಜೀವ್ ಚಂದ್ರಶೇಖರ್ ಅವರ ತಂದೆ ವಾಯುದಳದಲ್ಲಿ ಏರ್ ಕಮಾಂಡರ್ ಆಗಿದ್ದ ಎಂ.ಕೆ.ಚಂದ್ರಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಂ.ಕೆ.ಚಂದ್ರಶೇಖರ್ ಅವರು ಖುದ್ದು ಡಕೋಟದ ಪೈಲಟ್ ಆಗಿ ಕಾರ್ಯ ನಿರ್ವಹಿಸಿದ್ದರು.
ಡಿಸಿ 3 ಡಕೋಟ ವಿಮಾನ ಸಂಖ್ಯೆ ವಿಪಿ 905ಗೆ ಪರಶುರಾಮ ಎಂಬ ಹೆಸರಿಡಲಾಗಿದೆ. ಇದೇ ವಿಮಾನ 1947ರ ಅಕ್ಟೋಬರ್ 27ರಂದು ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ಒಂದು ಸಿಖ್ ರೆಜಿಮೆಂಟ್ ಅನ್ನು ಸಾಗಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಡಕೋಟ ನನ್ನ ಬಾಲ್ಯದ ಭಾಗವಾಗಿತ್ತು. ನನ್ನ ತಂದೆ ಈ ವಿಮಾನವನ್ನು ದೇಶದೆಲ್ಲೆಡೆ ಹಾರಿಸಿದ್ದರು. ಇಂದು ಡಿಸಿ 3 ಡಕೋಟವನ್ನು ಭಾರತೀಯ ವಾಯುಸೇನೆಗೆ ಉಡುಗೊರೆಯಾಗಿ ನೀಡುವ ಮೂಲಕ ನನ್ನ ತಂದೆಯ ಕನಸು ಸಾಕಾರಗೊಳ್ಳುವಲ್ಲಿ ನಾನು ಸಹಾಯ ಮಾಡಿದಂತಾಗಿದೆ ಎಂದು ಹೇಳಿದರು. ವಿಮಾನಕ್ಕೆ ಚಿರಂಜೀವಿ ಸೈನಿಕನಾಗಿರುವ, ವಿಷ್ಣುವಿನ 6ನೇ ಅವತಾರವಾದ ಪರಶುರಾಮ ಎಂದು ಹೆಸರಿಡಲಾಗಿದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದರು.
ಗುಜರಿ ಸೇರಿದ್ದ ಈ ವಿಮಾನವನ್ನು ಉಡುಗೊರೆಯನ್ನು ನೀಡುವ ಮೂಲಕ ಡಕೋಟವನ್ನು ಚಲಾಯಿಸಿದ ಎಲ್ಲ ವಾಯುಸೇನೆ ಸೈನಿಕರು ಮತ್ತವರ ಕುಟುಂಬದವರಿಗೆ ಸಮರ್ಪಿಸುತ್ತೇನೆ. ಡಕೋಟವು 1947 ರಿಂದ 1971ರವರೆಗೆ ದೇಶದ ಅತ್ಯಂತ ಮೂಲೆಗಳಲ್ಲೂ ಸೇವೆ ಸಲ್ಲಿಸಿದ ವಿಮಾನವಾಗಿದೆ ಎಂದು ನಿವೃತ್ತ ಏರ್ ಕಮಾಂಡರ್ ಎಂ.ಕೆ.ಚಂದ್ರಶೇಖರ್ ಭಾವುಕರಾಗಿ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.