
ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಅಧಿಕಾರಿಗಳು ರಾಜ್ಯದ ಆರು ಸರ್ಕಾರಿ ನೌಕರರಿಗೆ ಸೇರಿದ 22 ಸ್ಥಳಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಆಸ್ತಿ-ಪಾಸ್ತಿಗಳ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಗೊಳಗಾದ ನೌಕರರಿಗೆ ಸೇರಿದ ಸ್ಥಳಗಳಲ್ಲಿ ತಡರಾತ್ರಿವರೆಗೆ ಶೋಧ ಕಾರ್ಯ ನಡೆದಿದೆ. ಬೆಂಗಳೂರು, ಮೈಸೂರು, ಧಾರವಾಡ, ದಾವಣಗೆರೆ ಜಿಲ್ಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿಯ ಕೆಪಿಟಿಸಿಲ್ ಸಹಾಯಕ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್ ಎನ್. ಸವಣೂರು, ಧಾರವಾಡದ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರೀಶ್ವನಾಥ ವರೂರ, ಕುಂದಾಪುರ ತಾಲೂಕು ಪಂಚಾಯಿತಿ ಕಿರಿಯ ಎಂಜಿನಿಯರ್ ರವಿಶಂಕರ, ಬಿಬಿಎಂಪಿ ಹೆಮ್ಮಿಗೆಪುರ ಕಚೇರಿಯ ಕಂದಾಯ ನಿರೀಕ್ಷಕ ಶಿವಕುಮಾರ್, ಮೈಸೂರು ನಗರ ಪಾಲಿಕೆ ವಾಟರ್ ಇನ್ಸ್‌ಪೆಕ್ಟರ್ ಕೃಷ್ಣೇಗೌಡ, ದಾವಣಗೆರೆ ಜಿಲ್ಲೆ ಜಗಳೂರಿನ ಗುರುಸಿದ್ದಪುರ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜ್ ಅವರಿಗೆ ಸೇರಿದ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ಮಲ್ಲಿಕಾರ್ಜುನ್ ಸವಣೂರ ಅವರಿಗೆ ಸೇರಿದ ಹುಬ್ಬಳಿಯಲ್ಲಿನ ಶಿರೂರು ಪಾರ್ಕ್ನಲ್ಲಿನ ಮನೆ ಸೇರಿ ಮೂರು ನಿವಾಸ, ಅಂಗಡಿ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಪರೀಶ್ವನಾಥ ವರೂರ ಅವರ ಧಾರವಾಡದ ಶಾಸ್ತ್ರಿನಗರ ನಿವಾಸ ಸೇರಿ ಮೂರು ಮನೆಗಳು, ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದೆ.
ರವಿಶಂಕರ ಅವರ ಕುಂದಾಪುರದಲ್ಲಿನ ವಡೇರಾ ಹೋಬಳಿಯಲ್ಲಿನ ಮನೆ ಸೇರಿ ಎರಡು ನಿವಾಸ, ಕಚೇರಿ ಮತ್ತು ಶಿವಕುಮಾರ್ ಅವರ ಬೆಂಗಳೂರಿನ ದೊಡ್ಡಕಲ್ಲಸಂದ್ರದಲ್ಲಿನ ಮನೆ ಮತ್ತು ಕಚೇರಿಯಲ್ಲಿ ತಡರಾತ್ರಿವರೆಗೆ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಕೃಷ್ಣೇಗೌಡ ಅವರ ಮೈಸೂರು ಆನಂದನಗರದಲ್ಲಿನ ಮನೆ, ಒಂಟಿಕೊಪ್ಪಲಿನಲ್ಲಿನ ಕಚೇರಿ ಹಾಗೂ ನಾಗರಾಜ್ ಅವರ ದಾವಣಗೆರೆಯಲ್ಲಿನ ವಾಸದ ಮನೆ ಸೇರಿ ನಾಲ್ಕು ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.