ಬಿಎಸ್‌ವೈ ರೈತ ಕಹಳೆ

By Suvarna Web DeskFirst Published Apr 11, 2018, 7:50 AM IST
Highlights

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಒಮ್ಮೆ ಇಡೀ ರಾಜ್ಯ ಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ಇದೀಗ ಎರಡನೇ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ/ಗದಗ : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಒಮ್ಮೆ ಇಡೀ ರಾಜ್ಯ ಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು, ಇದೀಗ ಎರಡನೇ ರಾಜ್ಯ ಪ್ರವಾಸ ಆರಂಭಿಸಿದ್ದಾರೆ.

ಮೊದಲ ರಾಜ್ಯ ಪರ್ಯಟನೆ ವೇಳೆ ರಸ್ತೆ ಮಾರ್ಗವನ್ನೇ ಅವಲಂಬಿಸಿದ್ದ ಅವರು, ಈ ಬಾರಿ ತ್ವರಿತ ಸಂಚಾರಕ್ಕಾಗಿ ಬಹುತೇಕ ಹೆಲಿಕಾಪ್ಟರ್‌ ಪ್ರಯಾಣ ಅವಲಂಬಿಸಲಿದ್ದಾರೆ. ಬಹಿರಂಗ ಪ್ರಚಾರ ಅಂತ್ಯಗೊಳ್ಳುವವರೆಗೂ ರಾಜ್ಯದ 224 ಕ್ಷೇತ್ರಗಳನ್ನು ಹೆಲಿಕಾಪ್ಟರ್‌ನಲ್ಲೇ ಸುತ್ತಲಿರುವ ಅವರು, ಮಂಗಳವಾರದಂದು ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಮಿಂಚಿನ ಸಂಚಾರ ನಡೆಸಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ದ್ವಿತೀಯ ಯಾತ್ರೆಯಲ್ಲಿ ರೈತರ ವಿಚಾರಗಳಿಗೆ ಆದ್ಯತೆ ನೀಡಿರುವ ಯಡಿಯೂರಪ್ಪ, ರೈತರಿಗೆ ಹಲವು ಭರವಸೆಗಳನ್ನೂ ಇತ್ತರು. ಅಲ್ಲದೆ, ರೈತರ ಸಮಸ್ಯೆಗೆ ಪರಿಹಾರ ನೀಡುವ ಬಗ್ಗೆ ಪ್ರಣಾಳಿಕೆಯಲ್ಲೇ ಉಲ್ಲೇಖ ಮಾಡುವುದಾಗಿ ಹೇಳಿದರು.

ಬಿರುಸಿನ ಪ್ರಚಾರ: ಮಂಗಳವಾರರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಭತ್ತ ಬೆಳೆಗಾರರೊಂದಿಗೆ ಸಂವಾದ, ಭತ್ತದ ಗದ್ದೆಗೆ ಭೇಟಿ, ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಮುಷ್ಟಿಅಕ್ಕಿ ಅಭಿಯಾನ, ಲಂಬಾಣಿ ಸಮುದಾಯದವರೊಂದಿಗೆ ಸಂವಾದ ನಡೆಸಿದ ಅವರು, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ತರಾಟೆಗೆ ತೆಗೆದುಕೊಂಡರು. ಇದೇವೇಳೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬೆಳೆ ಸರ್ವೆ, ವಿದ್ಯುತ್‌ ಪೂರೈಕೆ ಸೇರಿದಂತೆ ಹಲವು ಸೌಕರ್ಯಗಳನ್ನು ರೈತರಿಗೆ ಒದಗಿಸಿ ಅನ್ನದಾತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹಾರ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ರೈತರ ಶೋಷಣೆಯಾಗುತ್ತಿದ್ದು 3751 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂಥ ದುಸ್ಥಿತಿ ಎಂದೂ ಬಂದಿರಲಿಲ್ಲ. ರೈತರ ಸಾಲ ಮನ್ನಾ ಮಾಡಿದ್ದೇವೆ ಎನ್ನುವ ರಾಜ್ಯ ಸರ್ಕಾರ ಅದನ್ನು ಪಾವತಿ ಮಾಡಿಲ್ಲ. ಮುಂಗಡ ಯೋಜನೆಗಳನ್ನು ಘೋಷಣೆ ಮಾಡಿ, ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಮುಂದಿನ ಸರ್ಕಾರ ಇದೆಲ್ಲವನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಬೆಳೆ ಇರುವಾಗಲೇ ಸರ್ವೇ:

ನೀರಿನ ಅಭಾವದಿಂದ ಬತ್ತ ಹಾನಿಯಾಗಿದ್ದು, ಇದಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಖಂಡಿತ ಪರಿಹಾರ ನೀಡಲಾಗುವುದು. ಬೆಳೆ ಇರುವಾಗಲೇ ತಕ್ಷಣ ಸರ್ವೆ ಮಾಡಬೇಕಾಗುತ್ತದೆ. ಮುಂದಿನ ಸರ್ಕಾರ ಅಧಿಕಾರಕ್ಕೆ ಬಂದೊಡನೆ ಈ ಕುರಿತು ತಕ್ಷಣ ನಿರ್ಧಾರ ಕೈಗೊಂಡು ನಾನು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ ತಿಳಿಸಿದರು. ಇದೇ ವೇಳೆ ಸೋನಾ ಮಸೂರಿ ಅಕ್ಕಿ ದೇಶದಲ್ಲಿಯೇ ವಿಶೇಷವಾಗಿದ್ದು, ಇದಕ್ಕೆ ಭೌಗೋಳಿಕ ಸೂಚ್ಯಂಕ ಪಡೆಯುವುದಕ್ಕೆ ನಮ್ಮ ಸರ್ಕಾರ ಬಂದ ಮೇಲೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಮೈಲ್ಮನೆಗೆ ರೈತ ಪ್ರತಿನಿಧಿ ಚಿಂತನೆ: ಬಾಪಿರೆಡ್ಡಿ ಕ್ಯಾಂಪಿನ ರೈತ ಸತ್ಯನಾರಾಯಣ ಎಂಬವರು ಪ್ರಶ್ನೆ ಮಾಡಿ, ವಿಧಾನಸಭೆಯಲ್ಲಿ ರೈತರ ಬಗ್ಗೆ ಅಷ್ಟಾಗಿ ಚರ್ಚೆಯಾಗುವುದೇ ಇಲ್ಲ. ಮೇಲಾಗಿ ಇಲ್ಲಿಯ ಸಮಸ್ಯೆಯನ್ನು ಅಲ್ಲಿ ಬಿಂಬಿಸುವುದಕ್ಕೆ ಅವಕಾಶವೇ ಇಲ್ಲ. ಶಿಕ್ಷಕರ ಕ್ಷೇತ್ರ, ಪದವೀಧರ ಕ್ಷೇತ್ರಗಳಿವೆ. ಆದರೆ, ರೈತರ ಕ್ಷೇತ್ರವೇ ಇಲ್ಲ. ಹೀಗಾಗಿ, ಮೇಲ್ಮನೆಯಲ್ಲೊಬ್ಬ ರೈತ ಪ್ರತಿನಿಧಿ ಇರುವಂತಾಗಬೇಕು ಎಂದು ಆಗ್ರಹಿಸಿದರು. ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಇದೊಂದು ಅತ್ಯುತ್ತಮವಾದ ಸಲಹೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ಮೇಲ್ಮನೆಯಲ್ಲೊಬ್ಬ ರೈತ ಪ್ರತಿನಿಧಿ ಇರಬೇಕು ಎನ್ನುವುದು ನನ್ನ ಭಾವನೆಯೂ ಹೌದು. ಇದನ್ನು ನಾನು ನನ್ನ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ, ಮುಂದಿನ ನಿರ್ಧಾರವನ್ನು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟ ಮಾಡುತ್ತೇನೆ ಎಂದರು.

ಹೆಚ್ಚಿನ ವಿದ್ಯುತ್‌ ಸೌಕರ್ಯ: ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಮುಷ್ಟಿಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ ಅವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ರೈತರ ನೀರಾವರಿಗೆ ಹೆಚ್ಚಿನ ವಿದ್ಯುತ್‌ ಮತ್ತು ಅನುದಾನ ನೀಡುವ ಕಾರ್ಯ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಜ್ಞಾ ವಿಧಿ ಬೋಧನೆ

ರೈತ ಸಂವಾದ ಕಾರ್ಯಕ್ರಮದಲ್ಲಿ ರೈತರಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಿದ್ದು ಅಚ್ಚರಿಗೆ ಕಾರಣವಾಯಿತು. ಅದು ಭ್ರಷ್ಟಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆದು, ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಪ್ರತಿಜ್ಞೆ ಮಾಡಿಸಲಾಯಿತು. ಮತ ಯಾಚನೆ ಮಾಡಬಹುದಾದರೂ ಈ ರೀತಿ ಪ್ರತಿಜ್ಞಾ ವಿಧಿ ಬೋಧನೆ ಮಾಡುವುದು ಎಷ್ಟುಸರಿ ಎನ್ನುವ ಪ್ರಶ್ನೆಯೂ ಕೇಳಿ ಬಂದಿತು.

click me!