ಅಂದು ಉಗ್ರ, ಇಂದು ಭಾರತಕ್ಕಾಗಿ ಬಲಿದಾನ: ಹೀಗೋರ್ವ ಸೈನಿಕನ ಕಥೆ!

By Web DeskFirst Published Nov 27, 2018, 1:45 PM IST
Highlights

ಉಗ್ರವಾದಿಯಾಗಿದ್ದಾತ ಸೈನ್ಯ ಸೇರಿ ಹುತಾತ್ಮನಾದ ಕಥೆ! ಎನ್‌ಕೌಂಟರ್‌ನಲ್ಲಿ ಬಲಿಯಾದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ! ಈ ಹಿಂದೆ ಉಗ್ರವಾದ ಸಂಘಟನೆಯಲ್ಲಿ ಸಕ್ರೀಯರಾಗಿದ್ದ ವಾನಿ! ಭಯೋತ್ಪಾದಕ ಸಂಘಟನೆ ತೊರೆದು ಭಾರತೀಯ ಸೇನೆ ಸೇರಿದ್ದ ವಾನಿ! ಭಾರತಾಂಬೆಯ ಪಾದಕ್ಕೆ ತಮ್ಮ ರಕ್ತದ ತರ್ಪಣ ನೀಡಿ ಹುತಾತ್ಮನಾದ ವೀರ

ಶ್ರೀನಗರ(ನ.27): ಇತ್ತೀಚಿಗೆ ಕಣಿವೆ ರಾಜ್ಯದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ವೀರ ಮರಣವನ್ನಪ್ಪಿದ್ದರು.

ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಭಾರತಾಂಬೆಗೆ ತಮ್ಮ ರಕ್ತದ ತರ್ಪಣ ನೀಡಿ ಹುತಾತ್ಮರಾಗಿದ್ದಾರೆ. ಆದರೆ ವಾನಿ ಅವರ ಜೀವನ ನಿಜಕ್ಕೂ ಅನುಕರಣೀಯ, ಒಂದು ಆದರ್ಶಮಯ ಜೀವನದ ಉದಾಹರಣೆ ನೀಡಿ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ನಮ್ಮನ್ನು ಅಗಲಿದ್ದಾರೆ.

ಹೌದು, ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಈ ಹಿಂದೆ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು. ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಪರವಾಗಿದ್ದ ವಾನಿ, ಉಗ್ರವಾದಿ ಸಂಘಟನೆ ಸೇರಿ ಭಾರತದ ವಿರುದ್ಧ ಯುದ್ಧ ಸಾರಿದ್ದ ಉಗ್ರವಾದಿ.

ಆದರೆ ತಾವು ಆರಿಸಿಕೊಂಡ ದಾರಿ ಸರಿಯಲ್ಲ ಎಂದು ಮನವರಿಕೆಯಾದ ಬಳಿಕ ವಾನಿ ಭಯೋತ್ಪಾದಕ ಸಂಘಟನೆಯನ್ನು ತೊರೆದರು. ಅಲ್ಲದೇ ಭಾರತೀಯ ಸೈನ್ಯದ ಮುಂದೆ ಶರಣಾಗಿ ಮುಂದೆ ಅದೇ ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಆಗಿ ನೇಮಕಗೊಂಡರು ನಝೀರ್ ಅಹ್ಮದ್ ವಾನಿ.

ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ಭಾತೀಯ ಸೈನ್ಯ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ 6 ಉಗ್ರರನ್ನು ಸದೆಬಡಿದಿತ್ತು. ಈ ಸಂದರ್ಭದಲ್ಲಿ ಲ್ಯಾನ್ಸ್ ನಾಯಕ್ ವಾನಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

General Bipin Rawat & all ranks salute supreme sacrifice of Lance Naik Nazir Ahmad Wani, SM* & offer sincere condolences to the family. pic.twitter.com/vYpYEwseOu

— ADG PI - INDIAN ARMY (@adgpi)

ದಕ್ಷಿಣ ಕಾಶ್ಮೀರದ ಕುಲ್ಗಾಮ್ ನ ಚೆಕಿ ಅಸ್ಮುಜಿ ಗ್ರಾಮದವರಾಗಿದ್ದ ವಾನಿ, 2004 ರಲ್ಲಿ ಪ್ರಾದೇಶಿಕ ಸೈನ್ಯದ 162 ಬೆಟಾಲಿಯನ್ ಸೇರಿದ್ದರು. ಕುಲ್ಗಾಮ್ ಜಿಲ್ಲೆ ಭಯೋತ್ಪಾದಕ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ. ಕರ್ತವ್ಯನಿಷ್ಠನಾಗಿದ್ದ ವಾನಿಗೆ 2007ರಲ್ಲಿ ಶೌರ್ಯ ಪ್ರಶಸ್ತಿ ಕೂಡ ಲಭಿಸಿತ್ತು. 

ಲ್ಯಾನ್ಸ್ ನಾಯಕ್ ವಾನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ.  ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ವಾನಿ (38) ಗೆ ಪ್ರಥಮ ಚಿಕಿತ್ಸೆಯನ್ನು ನೀಡಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ, ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 

click me!