ನಾನೂ ಅಯ್ಯಪ್ಪ ಭಕ್ತ, ಕರ್ತವ್ಯಕ್ಕೆ ಜಾತಿ ಇಲ್ಲ : ಕನ್ನಡಿಗ ಸಿಂಗಂ

By Web DeskFirst Published Nov 27, 2018, 1:27 PM IST
Highlights

ನಾನೂ ಓರ್ವ ಅಯ್ಯಪ್ಪ ಭಕ್ತನಾಗಿದ್ದು  ಕರ್ತವ್ಯಕ್ಕೆ ಜಾತಿ ಎಂದಿಗೂ ಕೂಡ ಅಡ್ಡಿಯಾಗದು. ನಾನು ಚಿಕ್ಕಂದಿನಿಂದಲೂ ದೇಗುಲಕ್ಕೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದೇನೆ ಎಂದು ಕರ್ನಾಟಕದ ಸಿಂಗಂ ಎಂದೇ ಖ್ಯಾತರಾದ ಕೇರಳ ಪೊಲೀಸ್ ಅಧಿಕಾರಿ ಯತೀಶ್ ಚಂದ್ರ ಹೇಳಿದ್ದಾರೆ. 

ತಿರುವನಂತಪುರಂ : ಭಕ್ತರ ದರ್ಶನಕ್ಕೆ ಅಯ್ಯಪ್ಪ ದೇಗುಲದ ಬಾಗಿಲು ತೆರೆದ ವೇಳೆ ಇಲ್ಲಿನ ನೀಲಕ್ಕಲ್ ಪ್ರದೇಶದ ಭದ್ರತಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಪೊಲೀಸ್ ಅಧಿಕಾರಿ ಯತೀಶ್ ಚಂದ್ರ ಅವರು ಶಬರಿಮಲೆಯಲ್ಲಿನ ಶಾಂತಿಯನ್ನು ಯಾರೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಇಲ್ಲಿನ ಯಾವುದೇ ರೀತಿಯ ಭದ್ರತಾ ಸಮಸ್ಯೆಯನ್ನು ನಿವಾರಿಸಲೂ ಕೂಡ ಪೊಲೀಸರು ಸದಾ ಸಿದ್ಧರಿದ್ದಾರೆ . ಯಾವುದೇ ರೀತಿಯ ಸಮಸ್ಯೆ ಇಲ್ಲದೆಯೇ ಯಾವುದೇ ಭಕ್ತರೂ ಕೂಡ ಶಬರಿಮಲೆ ದೇಗುಲಕ್ಕೆ ತೆರಳಬಹುದು ಎಂದು  ಹೇಳಿದ್ದಾರೆ. 

ಈಗಾಗಲೇ 50 ಸಾವಿರಕ್ಕೂ ಕೂಡ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ತಲುಪಿದ್ದಾರೆ. ಇದೊಂದು ಉತ್ತಮ ಸೂಚನೆಯಾಗಿದ್ದು, ನವೆಂಬರ್ 30ರ ವರೆಗೂ ತಾವಿಲ್ಲಿ ಕಾರ್ಯನಿರ್ವಹಿಸಲಿದ್ದು ಈ ಕಾರ್ಯ ಸೂಕ್ತವಾಗಿ ಮುಂದುವರಿಯಲಿದೆ ಎಂದಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಶಬರಿಮಲೆ ದೇಗುಲಕ್ಕೆ ತೆರಳುವ ಬಗ್ಗೆ ಯಾವುದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದಲ್ಲಿಯೂ ಸೂಕ್ತ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. 

ಅಲ್ಲದೇ ನಾನೂ ಕೂಡ ಅಯ್ಯಪ್ಪ ಭಕ್ತನಾಗಿದ್ದು, ಚಿಕ್ಕಂದಿನಿಂದಲೇ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡುತ್ತಿದ್ದೇನೆ. ನಾನೋರ್ವ ಹಿಂದೂ ಆಗಿದ್ದು, ನನ್ನ ಕರ್ತವ್ಯಕ್ಕೆ ಎಂದಿಗೂ ನನ್ನ ಜಾತಿ, ಧರ್ಮ ಅಡ್ಡಬರುವುದಿಲ್ಲ, ನಾನು ಬಡವನಾಗಿಯೇ  ಇಲ್ಲಿಯವರೆಗೆ ಬಂದಿದ್ದು ಈಗಲೂ ಕೂಡ ಬಡತನದಲ್ಲಿಯೇ ಇದ್ದೇನೆ ಎಂದು ಪ್ರಸಿದ್ಧ ಮಲಯಾಳಂ ಪತ್ರಿಕೆಯೊಂದನ್ನು ಸಂದರ್ಶನ ನೀಡಿ ಯತೀಶ್ ಚಂದ್ರ ಈ ವಿಚಾರ ತಿಳಿಸಿದ್ದಾರೆ.

click me!