ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ ರೈತ ಮಹಿಳೆ ಜಯಶ್ರೀ! ರೈತರನ್ನು ಗೂಂಡಾ, ದರೋಡೆಕೋರರು ಎಂದು ಜರೆದಿದ್ದ ಸಿಎಂ! ಸಿಎಂ ಹೇಳಿಕೆಗೆ ರೈತ ಹೋರಾಟಗಾರ್ತಿ ಜಯಶ್ರೀ ಪ್ರತ್ಯುತ್ತರ! ವಿಧಾನಸೌಧ ಬೀಗ ಒಡೆದಿದ್ದ ದೇವೇಗೌಡ ದರೋಡೆಕೋರ ಅಲ್ಲವೇ?
ಮಲ್ಲಿಕಾರ್ಜುನ ಹೊಸಮನಿ
ಮುಧೋಳ(ನ.27): ಕಬ್ಬಿಗೆ ಬೆಂಬಲ ಬೆಲೆ ನಿಗದಿಗಾಗಿ ಆಗ್ರಹಿಸಿ ನಡೆದಿದ್ದ ರೈತ ಪ್ರತಿಭಟನೆ ವೇಳೆ, ರೈತರನ್ನು ದರೋಡೆಕೋರರು ಎಂದು ಜರೆದಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ರೈತ ಮಹಿಳೆ ಜಯಶ್ರೀ ಗುರನ್ನವರ್ ಟಾಂಗ್ ನೀಡಿದ್ದಾರೆ.
ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಇದ್ದಾಗ ಇದೇ ದೇವೇಗೌಡರು ವಿಧಾನಸೌಧದ ಬೀಗ ಒಡೆದಿದ್ದರು. ಹಾಗಾದರೆ ನಿಮ್ಮ ತಂದೆಯನ್ನು ಏನೆಂದು ಕರೆಯುತ್ತೀರಿ ಎಂದು ಜಯಶ್ರೀ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.
ಮುಧೋಳದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಜಯಶ್ರೀ, ಬೆಳಗಾವಿಯಲ್ಲಿ ನಡೆದಿದ್ದ ಘಟನೆಯನ್ನು ಉಲ್ಲೇಖಿಸಿ ರೈತರನ್ನು ಗೂಂಡಾ, ದರೋಡೆಕೋರರು ಎಂದೆಲ್ಲಾ ಕರೆಯುವುದಕ್ಕೆ ಮುಖ್ಯಮಂತ್ರಿಗಳಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದಿದ್ದಾರೆ.
ನ್ಯಾಯಕ್ಕಾಗುಇ ಆಗ್ರಹಿಸಿ ನಿಮ್ಮ ಮನೆ ಮುಂದೆ ಬಂದರೆ ನಮಗೆ ಗೂಂಡಾಗಳು ಎಂದು ಕರೆಯುವ ನೀವು, ಆಗ ವಿಧಾನಸೌಧದ ಬೀಗ ಒಡೆದ ನಿಮ್ಮ ತಂದೆಯನ್ನು ಕಳ್ಳ ಎಂದು ಕರೆಯುವದಿಲ್ಲವೇ ಎಂದು ಜಯಶ್ರೀ ಪ್ರಶ್ನಿಸಿದ್ದಾರೆ. ಸದ್ಯ ಜಯಶ್ರೀ ಅವರ ಈ ಹೇಳಿಕೆ ಭಾರೀ ವೈರಲ್ ಆಗಿದ್ದು, ಜಯಶ್ರೀಗೆ ಬೆಂಬಲದ ಮಹಾಪೂರ ಹರಿದುಬರುತ್ತಿದೆ.