35 ವರ್ಷದ ವಿಧವೆ ಜತೆ 80ರ ವೃದ್ಧ ಕವಿ ಮದುವೆ!

Published : Oct 22, 2018, 08:45 AM IST
35 ವರ್ಷದ ವಿಧವೆ ಜತೆ 80ರ ವೃದ್ಧ ಕವಿ ಮದುವೆ!

ಸಾರಾಂಶ

80 ವರ್ಷದ ವೃದ್ಧ ಕವಿಯೋರ್ವರು ಕೌಟುಂಬಿಕ ಕಿರಕುಳದಿಂದ ಬೇಸತ್ತು 35 ವರ್ಷದ ವಿಧವೆಯೋರ್ವರನ್ನು ವಿವಾಹವಾಗಿದ್ದಾರೆ. 

ನಾಗಮಂಗಲ :  ಕೈಹಿಡಿದ ಪತ್ನಿ ಮತ್ತು ಮಕ್ಕಳು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಬದುಕಿನಲ್ಲಿ ಆಸರೆ ಬಯಸಿ ಪಟ್ಟಣದ ಕುಂಬಾರಬೀದಿಯ 80 ವರ್ಷದ ವಯೋವೃದ್ಧ ಕವಿಯೊಬ್ಬರು 35 ವರ್ಷದ ವಿಧವೆಯನ್ನು ಎರಡನೇ ಮದುವೆಯಾಗಿದ್ದಾರೆ.

ಸಾಹಿತಿ, ಕವಿ ಎನ್‌.ಎಂ.ಮಹಮ್ಮದ್‌ ಗೌಸ್‌ ಎರಡು ಹೆಣ್ಣು ಮಕ್ಕಳಿರುವ ವಿಧವೆಯನ್ನು ವರಿಸಿದವರು. ಮದುವೆ ವಿಷಯ ತಿಳಿದ ಗೌಸ್‌ ಅವರ ಮೊದಲ ಪತ್ನಿ ಮತ್ತು ಮಕ್ಕಳು ನಡುರಸ್ತೆಯಲ್ಲೇ ಎರಡನೇ ಪತ್ನಿ ಮೇಲೆ ಹಲ್ಲೆ ನಡೆಸಿ, ಪ್ರಾಣಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ದೂರು ದಾಖಲಾಗಿದೆ.

ಏನಿದು ಪ್ರಕರಣ?: 

ನಿವೃತ್ತ ಶಿಕ್ಷಕ ಮಹಮ್ಮದ್‌ ಗೌಸ್‌ಗೆ ಪತ್ನಿ ಅಮಿನಾ ಖಾತೂನ್‌ ಹಾಗೂ ಮಾನಸಿಕ ಅಸ್ವಸ್ಥ ಹಾಬೀದ್‌, ಸಾಜೀದ್‌ ಮತ್ತು ಖಾಲೀದ್‌ ಎಂಬ ಮೂವರು ಗಂಡುಮಕ್ಕಳಿದ್ದಾರೆ. ಮಹಮ್ಮದ್‌ ಗೌಸ್‌ ಮತ್ತು ಪತ್ನಿ ಅಮಿನಾ ಖಾತೂನ್‌ ಇಬ್ಬರೂ ವೃತ್ತಿಯಲ್ಲಿ ಶಿಕ್ಷಕರಾಗಿದ್ದವರು. ಆದರೆ, ಹಲವು ವರ್ಷಗಳಿಂದ ಕುಟುಂಬದಲ್ಲಿ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. 

ಗೌಸ್‌ ಅವರಿಗೆ ಪತ್ನಿ ಹಾಗೂ ಮಕ್ಕಳು ಊಟವನ್ನೂ ಕೊಡುತ್ತಿರಲಿಲ್ಲ, ಹಲವು ವರ್ಷಗಳ ಕಾಲ ಹೋಟೆಲ್‌ನಲ್ಲೇ ಊಟ ಮಾಡಿಕೊಂಡು ಜೀವನ ಕಳೆಯುತ್ತಿದ್ದರಂತೆ. ಎರಡು ಬಾರಿ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರೂ ಪತ್ನಿ ಅಥವಾ ಮಕ್ಕಳು ಆರೈಕೆ ಮಾಡಲಿಲ್ಲ. ಅವರ ಸ್ನೇಹಿತರ ಮಕ್ಕಳೇ ಊಟೋಪಚಾರದ ವ್ಯವಸ್ಥೆ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. 

ಪಟ್ಟಣದ ಕುಂಬಾರ ಬೀದಿಯಲ್ಲಿರುವ ತಮ್ಮ ಮನೆಯ ಮತ್ತೊಂದು ಭಾಗದಲ್ಲಿ ಇಬ್ಬರು ಹೆಣ್ಣು ಮಕ್ಕಳಿರುವ ನೂರ್‌ ಅಬ್ಜಾ ಎಂಬ ವಿಧವೆಗೆ ಗೌಸ್‌ ಬಾಡಿಗೆಗೆ ಮನೆ ಕೊಟ್ಟಿದ್ದರು. ಪತ್ನಿ ಮತ್ತು ಮಕ್ಕಳಿಂದ ನಿರ್ಲಕ್ಷ್ಯಕ್ಕೊಳಗಾಗಿದ್ದ ಗೌಸ್‌ಗೆ ನೂರ್‌ ಅಬ್ಜಾ ಆಗಾಗ್ಗೆ ಊಟ ಕೊಡುತ್ತಿದ್ದರು. ಇದನ್ನೇ ತಪ್ಪಾಗಿ ಭಾವಿಸಿದ ಗೌಸ್‌ ಪತ್ನಿ ಮತ್ತು ಮಕ್ಕಳು ಅನೈತಿಕ ಸಂಬಂಧದ ಕಥೆ ಕಟ್ಟಿ, ಗೌಸ್‌ಗೆ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗುತ್ತಿದೆ. ಪತ್ನಿ ಮತ್ತು ಮಕ್ಕಳ ನಿಂದನೆ ಸಹಿಸಿಕೊಳ್ಳಲಾರದ ಗೌಸ್‌ ಕೊನೆಗೆ ವಿಧವೆ ನೂರ್‌ ಅಬ್ಜಾ ಅವರನ್ನೇ ಕಳೆದ ವಾರ ಮೈಸೂರಿಗೆ ಕರೆದುಕೊಂಡು ಹೋಗಿ ಎರಡನೇ ಮದುವೆಯಾಗಿ ಅ.17ರಂದು ಮನೆಗೆ ಕರೆತಂದಿದ್ದಾರೆ.

ವಿಷಯ ತಿಳಿದ ಮೊದಲ ಪತ್ನಿ ಅಮೀನಾ ಖಾತೂನ್‌, ಮಗ ಖಾಲೀದ್‌ ಮತ್ತು ಸೊಸೆ ಸೇರಿದಂತೆ ಕುಟುಂಬಸ್ಥರು ನಡುರಸ್ತೆಯಲ್ಲೇ ನೂರ್‌ ಅಬ್ಜಾಳಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿ ಮನೆ ಖಾಲಿಮಾಡುವಂತೆ ಪ್ರಾಣಬೆದರಿಕೆ ಹಾಕಿದ್ದಾರೆ. ಈ ಕುರಿತ ವಿಡಿಯೋ ಈಗ ವೈರಲ್‌ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಬೆಳಗಾವಿ ಅಧಿವೇಶನ: 89 ಸಂಘಟನೆಗಳಿಂದ ಪ್ರತಿಭಟನೆಗೆ ಕರೆ, 6000ಕ್ಕೂ ಹೆಚ್ಚು ಪೊಲೀಸರಿಂದ ಸರ್ಪಗಾವಲು