ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿರುವ ಸ್ತ್ರೀಯರೆಷ್ಟು..?

By Web DeskFirst Published Nov 11, 2018, 7:38 AM IST
Highlights

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ, ಮತ್ತೊಂದು ಐತಿಹಾಸಿಕ ಹೋರಾಟ ಮತ್ತು ಸಂಘರ್ಷಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆ ಗೋಚರಿಸಿದೆ. ಈಗಾಗಲೇ 560ಕ್ಕೂ ಅಧಿಕ ಸ್ತ್ರೀಯರು ದೇವಾಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ತಿರುವನಂತಪುರಂ :  ಸಂಪ್ರದಾಯ ಮತ್ತು ಕಾನೂನಿನ ನಡುವಿನ ಸಂಘರ್ಷದಿಂದಾಗಿ ಇಡೀ ದೇಶದ ಗಮನ ಸೆಳೆದಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ, ಮತ್ತೊಂದು ಐತಿಹಾಸಿಕ ಹೋರಾಟ ಮತ್ತು ಸಂಘರ್ಷಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆ ಗೋಚರಿಸಿದೆ. ಇದೇ ನ.16ರಿಂದ ನಡೆಯಲಿರುವ ವಾರ್ಷಿಕ ಯಾತ್ರೆ ಮತ್ತು ದೇವರ ದರ್ಶನಕ್ಕಾಗಿ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಜನ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು, ಈ ಪೈಕಿ 10-50 ನಡುವಿನ ವಯೋಮಾನದ 560 ಮಹಿಳೆಯರು ಸೇರಿದ್ದಾರೆ.

ಈ ವಯೋಮಾನದವರಿಗೂ ದೇಗುಲ ಪ್ರವೇಶ ನೀಡಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ ಹೇಳಿದೆ. ಆದರೆ ಕೋರ್ಟ್‌ ಆದೇಶದ ಹೊರತಾಗಿಯೂ ದೇಗುಲ ಪ್ರವೇಶಕ್ಕೆ ಆಗಮಿಸಿದ್ದ ಇದೇ ವಯೋಮಾನದ ಹಲವು ಮಹಿಳೆಯರಿಗೆ ಇತ್ತೀಚೆಗೆ ಸಾವಿರಾರು ಅಯ್ಯಪ್ಪ ಭಕ್ತಾದಿಗಳು ಅಡ್ಡಿ ಮಾಡಿ ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಹೀಗಿರುವಾಗ ಮತ್ತೆ 500ಕ್ಕೂ ಹೆಚ್ಚು ಜನ ಹೀಗೆ ದೇವರ ದರ್ಶನಕ್ಕೆ ಹೆಸರು ನೊಂದಾಯಿಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಮಹಿಳೆಯರಿಗೆಲ್ಲಾ ದೇವರ ದರ್ಶನಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲು ಮುಂದಾದಲ್ಲಿ, ಅದು ದಕ್ಷಿಣದ ರಾಜ್ಯಗಳಲ್ಲಿನ ಅಯ್ಯಪ್ಪ ಭಕ್ತರ ತೀವ್ರ ಆಕ್ರೋಶಕ್ಕೆ ತುತ್ತಾಗುವುದು ಖಚಿತ. ಕೊಡದೇ ಇದ್ದಲ್ಲಿ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘಿಸಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಕೇರಳ ಸರ್ಕಾರ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಜೊತೆಗೆ ಅವಕಾಶ ನೀಡಿದಲ್ಲಿ ಅದು ಪೊಲೀಸರು ಮತ್ತು ಸಾವಿರಾರು ಭಕ್ತರ ನಡುವೆ ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆಯೂ ಇದೆ. ಹೀಗಾಗಿ ವಾರ್ಷಿಕ ಅಯ್ಯಪ್ಪ ಯಾತ್ರೆ ಇದೀಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕಾಪ್ಟರ್‌ ಮೂಲಕ ಯಾತ್ರೆ: ಈ ನಡುವೆ ಭಕ್ತರೊಂದಿಗಿನ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಆಸಕ್ತ ಮಹಿಳಾ ಭಕ್ತರನ್ನು (10ರಿಂದ 50 ವರ್ಷ ವಯೋಮಿತಿ) ಸೇನಾ ಹೆಲಿಕಾಪ್ಟರ್‌ಗಳಲ್ಲಿ ಕೊಚ್ಚಿ ಮತ್ತು ತಿರುವನಂತಪುರಂನಿಂದ ಕರೆದೊಯ್ಯುವ ಯೋಚನೆಯನ್ನು ಪೊಲೀಸರು ಆರಂಭಿಸಿದ್ದಾರೆ. 1980ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಶಬರಿಮಲೆಗೆ ಭೇಟಿ ನೀಡಲು ಉದ್ದೇಶಿಸಿದ್ದ ಸಂದರ್ಭದಲ್ಲಿ ಹೆಲಿಪ್ಯಾಡ್‌ ಸಿದ್ಧಪಡಿಸಲಾಗಿತ್ತು.

ಆದರೆ ಕಡೇ ಕ್ಷಣದಲ್ಲಿ ಇಂದಿರಾ ತಮ್ಮ ಭೇಟಿ ರದ್ದುಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಈ ಹೆಲಿಪ್ಯಾಡ್‌ ಬಳಕೆಯಾಗಿಲ್ಲ. ಈ ಹೆಲಿಪ್ಯಾಡನ್ನು ಮತ್ತೆ ಹಾರಾಟಕ್ಕೆ ಅಣಿಗೊಳಿಸಲು ಅರಣ್ಯ ಇಲಾಖೆ ಅನುಮತಿ ಬೇಕಿದ್ದು, ಅದಕ್ಕಾಗಿ ಅರ್ಜಿ ಸಲ್ಲಿಸುವ ಯೋಚನೆಯಲ್ಲಿ ಪೊಲೀಸರು ಇದ್ದಾರೆ. ಅಲ್ಲದೆ, ಹೆಲಿಪ್ಯಾಡ್‌ನಿಂದ ಮಹಿಳಾ ಭಕ್ತರನ್ನು ದೇವಸ್ಥಾನದ ಗರ್ಭಗುಡಿಯವರೆಗೆ ಕರೆದೊಯ್ಯುವುದು ಕೂಡ ಸವಾಲಿನ ಕೆಲಸವಾಗಿರುವ ಕಾರಣ ಅಲ್ಲಿನ ಭದ್ರತಾ ವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಪೊಲೀಸ್‌ ಇಲಾಖೆ ಸಮಾಲೋಚನೆಯಲ್ಲಿ ನಿರತವಾಗಿದೆ.

click me!