ಲೋಕಸಭಾ, ವಿಧಾನಸಭಾ ಚುನಾವಣೆ ಏಕಕಾಲಕ್ಕೆ ನಡೆಸಲು 5 ತಿದ್ದುಪಡಿಗಳು ಅಗತ್ಯ

Published : Feb 06, 2018, 12:50 PM ISTUpdated : Apr 11, 2018, 01:10 PM IST
ಲೋಕಸಭಾ, ವಿಧಾನಸಭಾ ಚುನಾವಣೆ ಏಕಕಾಲಕ್ಕೆ ನಡೆಸಲು 5 ತಿದ್ದುಪಡಿಗಳು ಅಗತ್ಯ

ಸಾರಾಂಶ

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಸಾಕಾರಗೊಳ್ಳಬೇಕು ಅಂದರೆ ಸಂವಿಧಾನಕ್ಕೆ ಐದು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಇದಕ್ಕೆ ಎಲ್ಲ ರಾಜ್ಯ ಸರ್ಕಾರಗಳ ಒಪ್ಪಿಗೆಯನ್ನೂ ಪಡೆಯಬೇಕು. ಹಾಗೂ ಪ್ರತಿ 15 ವರ್ಷಕ್ಕೊಮ್ಮೆ ಎಲೆಕ್ಟ್ರಾನಿಕ್‌ ಮತಯಂತ್ರಗಳು (ಇವಿಎಂ) ಹಾಗೂ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್‌ (ವಿವಿಪ್ಯಾಟ್‌) ಯಂತ್ರಗಳನ್ನು ಬದಲಿಸಲು 2000 ಕೋಟಿ ರು. ಖರ್ಚು ಮಾಡಬೇಕು.

ನವದೆಹಲಿ (ಫೆ.06): ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಸಾಕಾರಗೊಳ್ಳಬೇಕು ಅಂದರೆ ಸಂವಿಧಾನಕ್ಕೆ ಐದು ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಇದಕ್ಕೆ ಎಲ್ಲ ರಾಜ್ಯ ಸರ್ಕಾರಗಳ ಒಪ್ಪಿಗೆಯನ್ನೂ ಪಡೆಯಬೇಕು. ಹಾಗೂ ಪ್ರತಿ 15 ವರ್ಷಕ್ಕೊಮ್ಮೆ ಎಲೆಕ್ಟ್ರಾನಿಕ್‌ ಮತಯಂತ್ರಗಳು (ಇವಿಎಂ) ಹಾಗೂ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್‌ (ವಿವಿಪ್ಯಾಟ್‌) ಯಂತ್ರಗಳನ್ನು ಬದಲಿಸಲು 2000 ಕೋಟಿ ರು. ಖರ್ಚು ಮಾಡಬೇಕು.

ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಕಾನೂನು ಇಲಾಖೆಯು ಚುನಾವಣಾ ಆಯೋಗದಿಂದ ಸಲಹೆ ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಆಂತರಿಕ ವರದಿಯಲ್ಲಿ ಈ ಅಂಶಗಳಿವೆ. ಜೊತೆಗೆ, ಈಗಿರುವ ಕೆಲ ರಾಜ್ಯಗಳ ವಿಧಾನಸಭೆಯ ಅವಧಿಯನ್ನು ವಿಸ್ತರಿಸಬೇಕಾಗಿ ಬರಬಹುದು ಅಥವಾ ಕಡಿತಗೊಳಿಸಬೇಕಾಗಿ ಬರಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.

ಏಕಕಾಲಕ್ಕೆ ಚುನಾವಣೆ ನಡೆಸಬೇಕೆಂಬ ಕೇಂದ್ರ ಸರ್ಕಾರದ ಆಶಯಕ್ಕೆ ಚುನಾವಣಾ ಆಯೋಗ ಸಹಮತ ವ್ಯಕ್ತಪಡಿಸಿದೆ. ಆದರೆ, ಆ ವಿಷಯದಲ್ಲಿ ಅದು ನೀಡಿರುವ ಷರತ್ತು ರೂಪದ ಸಲಹೆಗಳು ಗಮನಾರ್ಹವಾಗಿವೆ. ಇವು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದರೂ ಅಚ್ಚರಿಯಿಲ್ಲ.

ದೇಶದಲ್ಲಿ ಒಕ್ಕೂಟ ಮಾದರಿಯ ಪ್ರಜಾಪ್ರಭುತ್ವ ಇರುವುದರಿಂದ ಏಕಕಾಲಕ್ಕೆ ಚುನಾವಣೆ ನಡೆಸಲು ಮತ್ತು ಸಂವಿಧಾನವನ್ನು ಬದಲಿಸಲು ಎಲ್ಲಾ ರಾಜ್ಯಗಳ ಒಪ್ಪಿಗೆ ಪಡೆಯುವುದರ ಜೊತೆಗೆ ಎಲ್ಲಾ ರಾಜಕೀಯ ಪಕ್ಷಗಳ ಜೊತೆಗೆ ವಿಸ್ತೃತ ಮಾತುಕತೆಯೂ ನಡೆಯಬೇಕಿದೆ. ಹಾಗೆಯೇ, ಇವಿಎಂಗಳು ಹಾಗೂ ವಿವಿಪ್ಯಾಟ್‌ಗಳ ಆಯುಷ್ಯ 15 ವರ್ಷ ಮಾತ್ರ. ಅಂದರೆ ಅವುಗಳನ್ನು ಮೂರು ಅಥವಾ ನಾಲ್ಕು ಚುನಾವಣೆಗಷ್ಟೇ ಬಳಸಬಹುದು. ಏಕಕಾಲಕ್ಕೆ ಚುನಾವಣೆ ನಡೆಯುವುದಾದರೆ ಹೆಚ್ಚಿನ ಯಂತ್ರಗಳ ಅಗತ್ಯವೂ ಬೀಳುತ್ತದೆ ಮತ್ತು ಇವುಗಳನ್ನು 15 ವರ್ಷಗಳಿಗೊಮ್ಮೆ ಬದಲಿಸಲು ಸುಮಾರು 2000 ಕೋಟಿ ರು. ಬೇಕಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಂವಿಧಾನಕ್ಕೆ ಏನೇನು ತಿದ್ದುಪಡಿಯಾಗಬೇಕು?

1. 83ನೇ ಪರಿಚ್ಛೇದ: ರಾಜ್ಯಗಳ ವಿಧಾನಸಭೆಯ ಅವಧಿಯನ್ನು ಮೊಟಕುಗೊಳಿಸುವುದಕ್ಕೆ ಅಥವಾ ವಿಸ್ತರಿಸುವುದಕ್ಕೆ.

2. 85ನೇ ಪರಿಚ್ಛೇದ: ರಾಷ್ಟ್ರಪತಿಗಳು ಲೋಕಸಭೆಯನ್ನು ವಿಸರ್ಜಿಸುವುದಕ್ಕೆ.

3. 172ನೇ ಪರಿಚ್ಛೇದ: ರಾಜ್ಯಗಳ ವಿಧಾನಸಭೆಯ ಅವಧಿಯ ಬಗ್ಗೆ.

4. 174ನೇ ಪರಿಚ್ಛೇದ: ರಾಜ್ಯಗಳ ವಿಧಾನಸಭೆಯನ್ನು ವಿಸರ್ಜಿಸುವ ಬಗ್ಗೆ.

5. 356ನೇ ಪರಿಚ್ಛೇದ: ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌