
ಬೆಂಗಳೂರು(ಎ.27): ಇಷ್ಟು ದಿನ ನಿದ್ರಾವಸ್ಥೆಯಲ್ಲಿದ್ದ ಅಧಿಕಾರಿಗಳಿಗೆ ಎನ್ಜಿಟಿ ಚಾಟಿ ಬೀಸಿದ್ದೇ ತಡ, ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳು ಬೆಳ್ಳಂದೂರು ಕೆರೆ ರೌಂಡ್ಸ್ ಹೊಡೆಯುತ್ತಿದ್ದಾರೆ. ಅಷ್ಟೇ ಯಾಕೆ ಕೆರೆಗೆ ಎಲ್ಲಿಲ್ಲದ ಸೆಕ್ಯೂರಿಟಿ ಹಾಕಿದ್ದಾರೆ. ಅಪ್ಪಿತಪ್ಪಿ ಕೆರೆಗೆ ಕಸ,ತ್ಯಾಜ್ಯ ವಸ್ತು ಬಿಸಾಡಿದ್ರೆ ಮುಗಿತ್ತು ಲಕ್ಷ ಲಕ್ಷ ದಂಡ ಹಾಕುತ್ತಾರಂತೆ.
ಶತಾಯಗತಾಯವಾಗಿ ಬೆಳ್ಳಂದೂರು ಕೆರೆಯನ್ನು ಸ್ವಚ್ಛ ಮಾಡಲೇಬೇಕು ಎಂದು ಪಣ ತೊಟ್ಟಿರುವ ಬಿಡಿಎ ಕೆರೆ ಕಳೆ ತೆಗೆಯುವ ಕಾಮಗಾರಿಯನ್ನು ಚುರುಕುಗೊಳಿಸಿದೆ. ನಿನ್ನೆ ಅರ್ಬನ್ ಡೆವಲಪ್ಮೆಂಟ್ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ್ ಜೈನ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಮಾಲಿನ್ಯ ನಿಯಂತ್ರ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಸೇರಿದಂತೆ ಬಿಡಿಎ ಅಧಿಕಾರಿಗಳು ಕೆರೆ ಸುತ್ತಮುತ್ತ ನಡೆಯುತ್ತಿರುವ ಕಾಮಗಾರಿಯನ್ನ ಪರಿಶೀಲನೆ ನಡೆಸಿದರು.
ಬೆಳ್ಳಂದೂರು ಕೆರೆ ಕ್ಲೀನಿಂಗ್
ಇನ್ನೂ ರಾತ್ರೋ ರಾತ್ರಿ ಬೆಳ್ಳಂದೂರು ಕೆರೆಗೆ ಕಟ್ಟಡ ತ್ಯಾಜ್ಯ ಸೇರಿದಂತೆ ಹಲವರು ಕಸ ಹಾಕಿ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬಿಬಿಎಂಪಿ ಕೆರೆಯ ಸುತ್ತಮುತ್ತ 8 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಮುಂದಾಗಿದ್ದು, ಪ್ರಾಯೋಗಿಕವಾಗಿ ಎರಡು ಕ್ಯಾಮರಾಗಳನ್ನ ಅಳವಡಿಸಿದ್ದಾರೆ. ಈ ಕ್ಯಾಮರಾಗಳು ಹಗಲು ರಾತ್ರಿ ಕೆರೆಯನ್ನ ಕಾಯುತ್ತದೆ, ಯಾರಾದರೂ ಕಸ ಬಿಸಾಡಿದರೆ, ಆ ವಾಹನಗಳ ನಂಬರ್ ನೋಟ್ ಮಾಡಿಕೊಂಡು 5 ಲಕ್ಷ ರೂಪಾಯಿ ದಂಡ ಹಾಕಲು ಬಿಬಿಎಂಪಿ ಮುಂದಾಗಿದೆ.
ಇನ್ನು ಇದೇ ವೇಳೆ ಎನ್ ಜಿಟಿ ನಿರ್ದೇಶನದಂತೆ ಬೆಳಂದೂರು ಕೆರೆ ಸುತ್ತ ಇರುವ 48 ಕಾರ್ಖಾನೆಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪರಿಶೀಲನೆ ನಡೆಸಿದೆ. ಇದರಲ್ಲಿ ಪ್ರಮುಖವಾಗಿ 20 ಕಾರ್ಖಾನೆಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ಆಳವಡಿಸಿಕೊಳ್ಳದೇ ಇರುವುದನ್ನು ಪತ್ತೆ ಹಚ್ಚಲಾಗಿದ್ದು ಅವುಗಳಿಗೆ ನೋಟಿಸ್ ನೀಡಲಾಗಿದೆ.
ಇನ್ನು, ಬೆಳ್ಳಂದೂರು ಕೆರೆಯ ಮಾಲಿನ್ಯಕ್ಕೆ ಕಾರಣವಾಗಿರುವ ಸುಮಾರು 46 ಕಾರ್ಖಾನೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಜಡಿಯಲು ಮುಂದಾಗಿದೆ. ಬೆಳ್ಳಂದೂರು ಕೆರೆ ಸ್ವಚ್ಚತೆಗೆ ಸಂಬಂಧಪಟ್ಟ ಇಲಾಖೆಗಳು ಮೂರು ತಿಂಗಳೊಳಗಾಗಿ ಕೆರೆಯನ್ನು ಶುದ್ಧೀಕರಿಸುವ ಭರವಸೆ ನೀಡಿವೆ. ಒಟ್ಟಾರೆ ಇಷ್ಟು ದಿನ ನಿದ್ರಾವಸ್ಥೆಯಲ್ಲಿದ್ದ ಇಲಾಖೆಗಳು ಇದೀಗ ಎಚ್ಚೆತ್ತುಕೊಂಡಿರುವುದು ಮೆಟ್ರೋ ನಗರಿ ನಿವಾಸಿಗಳಲ್ಲಿ ಕೊಂಚ ನೆಮ್ಮದಿ ತಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.