ಪರಪ್ಪನ ಜೈಲಿಂದ 30 ಕೈದಿಗಳು ಶಿಫ್ಟ್!: ಕಾರಣವೇನು ಗೊತ್ತಾ?

By Suvarna Web DeskFirst Published Jul 17, 2017, 9:22 AM IST
Highlights

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಬಯಲಿಗೆ ಎಳೆದಿದ್ದ ಡಿಐಜಿ ರೂಪಾ ಅವರಿಗೆ ಅಲ್ಲಿನ ಅಕ್ರಮಗಳ ಬಗ್ಗೆ  ಮಾಹಿತಿ ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಕೈದಿಗಳನ್ನು ರಾಜ್ಯದ ವಿವಿಧ ಜಿಲ್ಲಾ ಕಾರಾಗೃಹಗಳಿಗೆ ಭಾನುವಾರ ಸ್ಥಳಾಂತರಿಸಲಾಗಿದೆ. ಅಲ್ಲದೆ, ರೂಪಾ ಅವರಿಗೆ ಮಾಹಿತಿ ನೀಡಿದ್ದ ಕೈದಿಗಳಿಗೆ ಜೈಲು ಅಧಿಕಾರಿಗಳು ಥಳಿಸಿದ್ದಾರೆ ಎಂದೂ ಹೇಳಲಾಗಿದ್ದು, ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ತಂಡ ಸೋಮವಾರ ಕಾರಾಗೃಹಕ್ಕೆ ಭೇಟಿ ನೀಡುವ ಮೂಲಕ ಅಧಿಕೃತವಾಗಿ ತನಿಖೆ ಆರಂಭಿಸುವ ನಿರೀಕ್ಷೆಯಿದೆ.

ಬಳ್ಳಾರಿ(ಜು.17): ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ಬಯಲಿಗೆ ಎಳೆದಿದ್ದ ಡಿಐಜಿ ರೂಪಾ ಅವರಿಗೆ ಅಲ್ಲಿನ ಅಕ್ರಮಗಳ ಬಗ್ಗೆ  ಮಾಹಿತಿ ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಕೈದಿಗಳನ್ನು ರಾಜ್ಯದ ವಿವಿಧ ಜಿಲ್ಲಾ ಕಾರಾಗೃಹಗಳಿಗೆ ಭಾನುವಾರ ಸ್ಥಳಾಂತರಿಸಲಾಗಿದೆ. ಅಲ್ಲದೆ, ರೂಪಾ ಅವರಿಗೆ ಮಾಹಿತಿ ನೀಡಿದ್ದ ಕೈದಿಗಳಿಗೆ ಜೈಲು ಅಧಿಕಾರಿಗಳು ಥಳಿಸಿದ್ದಾರೆ ಎಂದೂ ಹೇಳಲಾಗಿದ್ದು, ಪ್ರಕರಣದ ತನಿಖೆಯ ಹೊಣೆ ಹೊತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್‌ಕುಮಾರ್ ನೇತೃತ್ವದ ತಂಡ ಸೋಮವಾರ ಕಾರಾಗೃಹಕ್ಕೆ ಭೇಟಿ ನೀಡುವ ಮೂಲಕ ಅಧಿಕೃತವಾಗಿ ತನಿಖೆ ಆರಂಭಿಸುವ ನಿರೀಕ್ಷೆಯಿದೆ.

ತನಿಖಾಧಿಕಾರಿ ವಿನಯ್ ಕುಮಾರ್ ಅವರು ಕಾರಾಗೃಹಕ್ಕೆ ಭೇಟಿ ನೀಡುವ ವೇಳೆ ರೂಪಾ ಅವರು ಅಕ್ರಮ ಬಯಲಿಗೆ ಎಳೆಯಲು ಸಹಾಯ ಮಾಡಿದ್ದ ಕೆಲ ವಿಚಾರಣಾಧೀನ ಮತ್ತು ಸಜಾ ಕೈದಿಗಳು ಜೈಲು ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡಬಹುದು ಎಂಬ ಆತಂಕದಿಂದ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ, ಡಿಐಜಿ ರೂಪಾ ಅವರು ಸಲ್ಲಿಸಿದ್ದ ವರದಿಯಲ್ಲಿ ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್ ಅವರು ಮೇಲೂ ಗಂಭೀರ ಆರೋಪ ಮಾಡಲಾಗಿತ್ತು. ಹೀಗಾಗಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕೈದಿಗಳನ್ನು ಸ್ಥಳಾಂತರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಎಂಟು, ಮೈಸೂರಿಗೆ ನಾಲ್ವರು, ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಮೂವರು, ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ನಾಲ್ಕು, ವಿಜಯಪುರ ಜೈಲಿಗೆ ಮೂವರನ್ನು ವಿಶೇಷ ಭದ್ರತೆಯಲ್ಲಿ ಸ್ಥಳಾಂತರಿಸಲಾಗಿದೆ.

ಮಾಹಿತಿ ನೀಡಿದ್ದ ಕೈದಿಗಳಿಗೆ ಥಳಿತ?:

ಶನಿವಾರ ಡಿಐಜಿ ರೂಪಾ ಅವರು ಕಾರಾಗೃಹಕ್ಕೆ ಭೇಟಿ ನೀಡಿದ್ದ ವೇಳೆ ಅವರ ವಿರುದ್ಧ ಕೆಲ ಕೈದಿಗಳ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಈ ವೇಳೆ ಜೈಲು ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಮತ್ತು ರೂಪಾ ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಸುಮಾರು 700ರಿಂದ 800 ಕೈದಿಗಳ ಇನ್ನೊಂದು ಗುಂಪು ‘ಮೇಡಂ ನಿಮ್ಮ ಜೊತೆ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಕೂಗಿತ್ತು. ಆಗ ಅಧೀಕ್ಷಕ ಕೃಷ್ಣ ಕುಮಾರ್ ಪೊಲೀಸರ ಸಹಾಯದಿಂದ ಅವರನ್ನು ಬ್ಯಾರಕ್ ಒಳಗೆ ಕಳುಹಿಸಿದ್ದರು.

ರೂಪಾ ಅವರ ಪರವಾಗಿ ಘೋಷಣೆ ಕೂಗಿದ ಕೈದಿಗಳ ಪಟ್ಟಿ ಇಟ್ಟುಕೊಂಡು ಅವರನ್ನು ಥಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಭಾನುವಾರ ರಾಜ್ಯದ ವಿವಿಧ ಕಾರಾಗೃಹಕ್ಕೆ  ಸ್ಥಳಾಂತರ ಗೊಂಡ ಕೈದಿಗಳು ಕುಂಟುತ್ತಿದ್ದರು. ಇದನ್ನು ನೋಡಿದರೆ ಕೈದಿಗಳಿಗೆ ತೀವ್ರವಾಗಿ ಥಳಿಸಿರುವುದು ದೃಢಪಡುತ್ತದೆ ಎಂದು ಹೇಳಲಾಗಿದೆ.

ಇತ್ತ ಜೈಲಿನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಾತನಾಡಲು ಕನ್ನಡಪ್ರಭವು ಕಾರಾಗೃಹದ ಅಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿದರೂ, ಯಾವೊಬ್ಬ ಅಧಿಕಾರಿಯೂ ಸಂಪರ್ಕಕ್ಕೆ ಸಿಗಲಿಲ್ಲ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಶಶಿಕಲಾ ವಿ.ನಟರಾಜನ್ ಸೇರಿದಂತೆ ಕೆಲ ‘ಗಣ್ಯ ಕೈದಿ’ಗಳಿಗೆ ಹಣ ಪಡೆದು ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಬಂದೀಖಾನೆ ಇಲಾಖೆ ಮುಖ್ಯಸ್ಥರ ವಿರುದ್ಧವೇ ಡಿಐಜಿ ರೂಪಾ ವರದಿ ಸಲ್ಲಿಸಿದ್ದರು. ಬಳಿಕ ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ‌್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2ನೆ ವರದಿ ಸಲ್ಲಿಸಿದ್ದರು.

 

click me!