ವೇಶ್ಯಾವಾಟಿಕೆ ದಂಧೆಗೆ ಬಾಲಕಿ ಮಾರಿದ್ದವರ ಬಂಧನ

By Suvarna Web DeskFirst Published Dec 17, 2017, 1:57 PM IST
Highlights

ಬಾಲಕಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾಗ ಹೀಗೆ ಪರಿಚಯವಾಗಿದ್ದಳು. ದೆಹಲಿಯ ಅಪಾರ್ಟ್‌ಮೆಂಟ್'ವೊಂದರಲ್ಲಿ ಹೆಚ್ಚಿನ ವೇತನಕ್ಕೆ ಮನೆ ಕೆಲಸ ಕೊಡಿಸುತ್ತೇನೆ ಎಂದು ಬಾಲಕಿಗೆ ನಂಬಿಸಿ ಮಾರಾಟ ಮಾಡಿದ್ದೆ. ಹಣದ ಆಸೆಗಾಗಿ ಕೃತ್ಯ ಎಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಬೆಂಗಳೂರು(ಡಿ.17): ಮನೆ ಕೆಲಸ ಕೊಡಿಸುವುದಾಗಿ ಬಾಲಕಿಯನ್ನು ನಂಬಿಸಿ ದೆಹಲಿಯಲ್ಲಿ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ಮೂವರು ಆರೋಪಿಗಳನ್ನು ವೈಟ್‌'ಫೀಲ್ಡ್ ವಿಭಾಗದ ಪೊಲೀಸರು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ.

ಕೋಲಾರದ ಕೆಜಿಎಫ್ ಮೂಲದ ಶಿವ ಶಂಕರ್, ದೆಹಲಿ ಮೂಲದ ರಾಜೇಶ್ ಕುಮಾರ್, ಚೋಟು ರಾಮ್‌'ದೇನ್ ಬಂಧಿತರು. ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದ ದೆಹಲಿ ಮೂಲದ ಕಾಜಲ್ ಎಂಬ ಮಹಿಳೆ ಪರಾರಿಯಾಗಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮಾರತ್‌'ಹಳ್ಳಿ ನಿವಾಸಿ 17 ವರ್ಷದ ಬಾಲಕಿ ಜೂನ್ 6ರಂದು ನಾಪತ್ತೆಯಾಗಿದ್ದಳು. ಪುತ್ರಿ ಸ್ಥಳೀಯ ನಿವಾಸಿ ಪ್ರತಾಪ್ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಹೋಗಿರಬಹುದು ಎಂದು ಆಕೆಯ ಪೋಷಕರು ಅನುಮಾನಿಸಿದ್ದರು. ಪೊಲೀಸರಿಗೆ ದೂರು ನೀಡಿದರೆ ಕುಟುಂಬದ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ತಾವೇ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಮಗಳು ಪತ್ತೆಯಾಗದ ಕಾರಣ ಆಗಸ್ಟ್ 8ರಂದು ಮಾರತ್‌'ಹಳ್ಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ವೇಳೆ ಬಾಲಕಿ ಪ್ರತಾಪ್ ಎಂಬಾತನನ್ನು ಪ್ರೀತಿಸುತ್ತಿದ್ದ ವಿಷಯದ ಬಗ್ಗೆ ಪೊಲೀಸರಿಗೆ ಆಕೆಯ ಪೋಷಕರು ತಿಳಿಸಿದ್ದರು. ಪೊಲೀಸರು ಪ್ರತಾಪ್ ರೆಡ್ಡಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ನನ್ನೊಂದಿಗೆ ಸಂಪರ್ಕದಲ್ಲಿಲ್ಲ. ಅವಳ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದನು.

ಮೊಬೈಲ್ ನೀಡಿದ ಮಾಹಿತಿ: ಬಾಲಕಿ ತನ್ನ ಪೋಷಕರಿಗೆ ತಿಳಿಸದೆ ಮೊಬೈಲ್ ಬಳಸುತ್ತಿದ್ದಳು. ಪ್ರತಾಪ್ ಕೊಟ್ಟ ಮಾಹಿತಿ ಅನ್ವಯ ಬಾಲಕಿಯ ಮೊಬೈಲ್ ಸಂಖ್ಯೆ ಪಡೆದು ಸಿಡಿಆರ್ ಕರೆಗಳ ವಿವರ ಪರಿಶೀಲಿಸಿದಾಗ ಆರೋಪಿ ಶಿವಶಂಕರ್‌'ಗೆ ಕರೆ ಮಾಡಿರುವುದು ಪತ್ತೆಯಾಗಿದೆ. ಪೊಲೀಸರು ಶಿವಶಂಕರ್‌'ನನ್ನು ನಗರದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ₹ 70 ಸಾವಿರ ಹಣಕ್ಕೆ ಬಾಲಕಿಯನ್ನು ದೆಹಲಿಯ ವೇಶ್ಯಾವಾಟಿಕೆಯ ಜಾಲವೊಂದಕ್ಕೆ ಮಾರಾಟ ಮಾಡಿರುವ ವಿಷಯ ಬಾಯ್ಬಿಟ್ಟಿದ್ದ. ದೆಹಲಿಗೆ ತೆರಳಿದ್ದ ತಂಡ ಅಲ್ಲಿನ ಪೊಲೀಸರ ನೆರವಿನೊಂದಿಗೆ ಬಾಲಕಿಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದೆ. ಬಾಲಕಿಯನ್ನು ಹಣ ನೀಡಿ ಖರೀದಿಸಿದ್ದ ಕಾಜಲ್ ಪರಾರಿಯಾಗಿದ್ದಾಳೆ. ಆಕೆಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬಾಲಕಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾಗ ಹೀಗೆ ಪರಿಚಯವಾಗಿದ್ದಳು. ದೆಹಲಿಯ ಅಪಾರ್ಟ್‌ಮೆಂಟ್'ವೊಂದರಲ್ಲಿ ಹೆಚ್ಚಿನ ವೇತನಕ್ಕೆ ಮನೆ ಕೆಲಸ ಕೊಡಿಸುತ್ತೇನೆ ಎಂದು ಬಾಲಕಿಗೆ ನಂಬಿಸಿ ಮಾರಾಟ ಮಾಡಿದ್ದೆ. ಹಣದ ಆಸೆಗಾಗಿ ಕೃತ್ಯ ಎಸಗಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

click me!