ಶೌಚಾಲಯ ಇದ್ರೂ ಶೇ.23ರಷ್ಟು ಗ್ರಾಮೀಣ ಜನರಿಗೆ ಬಯಲೇ ಇಷ್ಟ

By Web DeskFirst Published Jul 29, 2019, 7:45 AM IST
Highlights

ಶೌಚಾಲಯ ಇದ್ರೂ ಶೇ.23ರಷ್ಟು ಗ್ರಾಮೀಣ ಜನರಿಗೆ ಬಯಲೇ ಇಷ್ಟ| ಧಾರ್ಮಿಕ ಶುದ್ಧತೆ, ಅಸ್ಪೃಶ್ಯತೆಗೆ ಹೆದರಿ ಶೌಚಾಲಯದಿಂದ ದೂರ

ನವದೆಹಲಿ[ಜು.29]: ಸ್ವಚ್ಛ ಭಾರತ ಯೋಜನೆಯ ಅಡಿಯಲ್ಲಿ ಸರ್ಕಾರ ಜನರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಆದರೆ, ಶೌಚಾಲಯಗಳು ಇದ್ದ ಹೊರತಾಗಿಯೂ ಶೇ.23ರಷ್ಟುಗ್ರಾಮೀಣ ಜನರು ಈಗಲೂ ಬಯಲು ಮಲ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಶೇ.43ರಷ್ಟುಗ್ರಾಮೀಣ ಪ್ರದೇಶದ ಜನರು 2018ರ ತನಕವೂ ಬಯಲಿನಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ. ಆದರೆ, ಅವರಲ್ಲಿ ಶೇ.23ರಷ್ಟುಜನರಿಗೆ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಿದರೂ ಬಯಲು ಶೌಚವನ್ನು ನಿಲ್ಲಿಸಿಲ್ಲ. ಧಾರ್ಮಿಕ ಶುದ್ಧತೆ, ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಗೆ ಹೆದರಿ ಜನರು ಸಾರ್ವನಿಕ ಶೌಚಾಲಯಗಳು ಇದ್ದರೂ ಬಯಲಿನಲ್ಲೇ ಶೌಚ ಮಾಡುತ್ತಿದ್ದಾರೆ ಎಂದು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಜನಸಂಖ್ಯಾ ತಜ್ಞರ ತಂಡವೊಂದು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಿಸಿದ ಆಧಾರದ ಮೇಲೆ 624 ಜಿಲ್ಲೆಗಳನ್ನು ಸರ್ಕಾರ ಬಯಲು ಶೌಚ ಮುಕ್ತ ಎಂದು ಘೋಷಿಸಿದೆ. 2014ಕ್ಕೆ ಹೋಲಿಸಿದರೆ ಗ್ರಾಮೀಣ ಜನರು ಬಯಲಿನಲ್ಲಿ ಮಲ ವಿಸರ್ಜನೆ ಮಾಡುವ ಪ್ರಮಾಣ ಶೇ.70ರಷ್ಟುಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.

click me!