
ಬೆಂಗಳೂರು [ಜು.28]: ಪತ್ನಿ ಕೊಂದು ಇತ್ತೀಚೆಗೆ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ ಜೈಲಿನ ಶೌಚಾಲಯಕ್ಕೆ ತೆರಳಿದ್ದಾಗ ಜಾರಿದ್ದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು ಮೃತಪಟ್ಟಿರುವ ಘಟನೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಚಿನ್ನಸ್ವಾಮಿ (40) ಮೃತ ವಿಚಾರಣಾಧೀನ ಕೈದಿ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲತಃ ತಮಿಳುನಾಡಿನ ಚಿನ್ನಸ್ವಾಮಿ ಪತ್ನಿ ಮತ್ತು ಮೂವರು ಮಕ್ಕಳ ಜತೆ ಮೈಕೋ ಲೇಔಟ್‌ನ ಬಿಳೇಕಳ್ಳಿಯಲ್ಲಿ ನೆಲೆಸಿದ್ದ. ಗುಜರಿ ವ್ಯಾಪಾರಿಯಾಗಿದ್ದ ವಿಪರೀತ ಕುಡಿತದ ಚಟಕ್ಕೆ ಬಿದ್ದಿದ್ದ. ಮೃತನ ಪತ್ನಿ ಉಮಾರಾಣಿ ಖಾಸಗಿ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತ್ನಿ ಶೀಲ ಶಂಕಿಸಿ ಚಿನ್ನಸ್ವಾಮಿ ನಿತ್ಯ ಪತ್ನಿ ಜತೆ ಜಗಳವಾಡುತ್ತಿದ್ದ.
ಜೂ.12ರಂದು ರಾತ್ರಿ 2.30ರ ಸುಮಾರಿಗೆ ಪತ್ನಿ ಉಮಾರಾಣಿ ನಿದ್ರೆಗೆ ಜಾರಿದ್ದರು. ಈ ವೇಳೆ ಪತ್ನಿಯ ತಲೆ ಮೇಲೆ ಆರೋಪಿ ಖಾಲಿ ಸಿಲಿಂಡರ್ ಎತ್ತಿ ಹಾಕಿ ಹತ್ಯೆ ಮಾಡಿದ್ದ. ಬಳಿಕ ಮೂವರು ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ ಪರಾರಿಯಾಗಿದ್ದ. ತಮಿಳುನಾಡಿನ ಧರ್ಮಪುರಿಗೆ ಹೋಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜೂ.14ರಂದು ಮೈಕೋ ಲೇಔಟ್ ಬಂಧಿಸಿ, ಜೈಲಿಗಟ್ಟಿದ್ದರು. ಜೈಲು ಸೇರಿದ ಬಳಿಕ ಆರೋಪಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ 9ನೇ ಬ್ಯಾರಕ್‌ನಲ್ಲಿ ಚಿನ್ನಸ್ವಾಮಿ ಇದ್ದ.
ಭಾನುವಾರ ಬೆಳಗ್ಗೆ ಬ್ಯಾರಕ್‌ನಿಂದ ಹೊರ ಬಂದು ಶೌಚಾಲಯಕ್ಕೆ ಹೋಗಿದ್ದಾನೆ. ಆಗ ಕಾಲು ಜಾರಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಇತರೆ ಕೈದಿಗಳು ಜೈಲು ಸಿಬ್ಬಂದಿಗೆ ಮಾಹಿತಿ ನೀಡಿ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಚಿನ್ನಸ್ವಾಮಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.